ಬೆಂಗಳೂರು : ಬಿಬಿಎಂಪಿಯ ಮುಖ್ಯ ಇಂಜಿನಿಯರಿಂಗ್ ಛಿಫ್ ಸರ್ಕಾರದ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಖಾಸಗಿಯಾಗಿ ಭೇಟಿಯಾಗಲು ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ,ಇಂಜಿನಿಯರಿಂಗ್ ಛಿಫ್ ಪ್ರಹ್ಲಾದ್ ಇರುವವರೆಗೂ ಬಿಬಿಎಂಪಿ ಉದ್ಧಾರ ಆಗಲ್ಲ ಎಂದಿದ್ದಾರೆ.
ಆತ ಬಂದ ಮೇಲೆ ಒಂದು ದೊಡ್ಡ ಕೆಲವನ್ನು ಮಾಡಿಲ್ಲ. ಅವನು ಇರುವವರೆಗೂ ಈ ಸಂಸ್ಥೆ ಉದ್ಧಾರ ಆಗಲ್ಲ. ಆತ ಬರೀ ವಾಂಕ್ ರಾಜ, ಇವರ ಹೆಸರು ಹೇಳಿಕೊಂಡು ದುಡ್ಡು ವಸೂಲಿ ಮಾಡುತ್ತಿದ್ದಾರೆ. ಆತನನ್ನು ಉಳಿಸಿಕೊಳ್ಳುವುದು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಅದನ್ನು ನಿರ್ಧರಿಸಲು ನಾನು ಸೂಕ್ತ ವ್ಯಕ್ತಿಯಲ್ಲ. ಬಿಬಿಎಂಪಿಯನ್ನು ಹಾಳು ಮಾಡುತ್ತಿರುವುದೇ ಆತ ಎಂದು ಕಿಡಿಕಾರಿದರು.
ಊರಿನವರೊಂದಿಗೆ ಡಿ.ಕೆ.ಶಿವಕುಮಾರ್ ಅವರನ್ನು ಖಾಸಗಿಯಾಗಿ ಭೇಟಿ ಮಾಡಲು ಬಂದಿದ್ದೇನೆ. ಸರ್ಕಾರ ಗುತ್ತಿಗೆದಾರರ ಬಾಕಿಯಲ್ಲಿ ಸ್ವಲ್ಪ ಬಿಡುಗಡೆ ಮಾಡಿದೆ, ಅದರ ಬಗ್ಗೆ ನಮಗೆ ಪೂರ್ತಿ ಸಮಾಧಾನ ಇಲ್ಲ. ಸದ್ಯಕ್ಕೆ ಸ್ವಲ್ಪ ಉತ್ತಮ ಎನ್ನಬಹುದಷ್ಟೆ. ಪೂರ್ತಿ ಬಿಡುಗಡೆ ಮಾಡಿ ಎಂದು ನಾವು ತುರ್ತು ಒತ್ತಡ ಹೇರುತ್ತಿದ್ದೇವೆ. ಡಿಸೆಂಬರ್ ವೇಳೆಗೆ ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು.