ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಚಳಿ ತುಂಬಾ ಜಾಸ್ತಿಯಿದ್ದು, ಶೀತಗಾಳಿ ಹೆಚ್ಚಾಗಲು ಕರಾವಳಿ ತೀರ ಪ್ರದೇಶದಲ್ಲಾದ ವಾತಾವರಣ ಬದಲಾವಣೆ ಕಾರಣ ಎಂದು ತಿಳಿದು ಬಂದಿದೆ.
ಹವಾಮಾನ ಬದಲಾವಣೆಯಿಂದ ರಾಜ್ಯದ ಮಕ್ಕಳು ವೈರಲ್ ಫೀವರ್ ಜೊತೆಗೆ ಕಾಲು ಬಾಯಿ ರೋಗಕ್ಕೆ ತುತ್ತಾಗಿದ್ದು, ಇದರಿಂದ ಪೋಷಕರು ತೀವ್ರ ಆತಂಕಗೊಂಡಿದ್ದಾರೆ.
ನಗರದ ಹಲವು ಅಪಾರ್ಟ್‌ಮೆಂಟ್ ಹಾಗೂ ಶಾಲೆಗಳಲ್ಲಿ ಈಗಾಗಲೇ ರೋಗ ಹೆಚ್ಚಾಗಿದ್ದು, ಚಳಿಗಾಲದ ಸಮಯದಲ್ಲಿ ಮಕ್ಕಳಲ್ಲೇ ಈ ಕಾಲು ಬಾಯಿ ರೋಗ ಹೆಚ್ಚಾಗಿ ಕಂಡುಬರುತ್ತದೆ.
15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ರೋಗ ಕಂಡು ಬರುತ್ತಿದ್ದು, ಮಕ್ಕಳ ಕೈ ಕಾಲುಗಳಲ್ಲಿ ತುರಿಕೆ, ಬಾಯಿ ಸುತ್ತ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಇವು ರೋಗದ ಪ್ರಮುಖ ಲಕ್ಷಣವಾಗಿವೆ.
ಇದು ಸಾಂಕ್ರಾಮಿಕ ರೋಗವಾಗಿದೆ. ಎಂಜಿಲು, ಉಸಿರು, ಸ್ಪರ್ಶದ ಮೂಲಕ ಮಕ್ಕಳಿಗೆ ಬೇಗ ಹರಡುತ್ತಿದ್ದು, ಸೂಕ್ತ ಎಚ್ಚರಿಕೆ ಕ್ರಮ ವಹಿಸುವಂತೆ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರಿಗೆ ವೈದ್ಯರು ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಲು ಬಾಯಿ ರೋಗಕ್ಕೆ ತುತ್ತಾದ ಮಕ್ಕಳನ್ನು ವಿಶೇಷ ಘಟಕದಲ್ಲಿರಿಸಿ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.