ಬೆಂಗಳೂರು: 2024ರ ದಸರಾ ಸಮೀಪಿಸುತ್ತಿದ್ದು ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ವಾಹನ ದಟ್ಟಣೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ಇಂದು ( ಸೆಪ್ಟೆಂಬರ್ 10 ) ಬೆಂಗಳೂರು ಗ್ರಾಮಾಂತರ ಸಂಸದ ಸಿಎನ್ ಮಂಜುನಾಥ್ ಅವರು ಕುಂಬಳಗೋಡು ಸಮೀಪದ ಕದಂಬ ಜಂಕ್ಷನ್‌ನಲ್ಲಿ ಪರಿಶೀಲನೆ ನಡೆಸಿದರು.
ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ʼಕದಂಬ ಜಂಕ್ಷನ್‌ನಲ್ಲಿ ವಾರಾಂತ್ಯದ ದಿನವೊಂದರಲ್ಲಿ ಒಂದು ಲಕ್ಷ ವಾಹನಗಳು ಸಂಚರಿಸುವ ಕಾರಣ ಸಂಚಾರ ದಟ್ಟಣೆ ಪ್ರಮುಖ ಸಮಸ್ಯೆಯಾಗಿದೆ. ದಸರಾ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸುವುದು ತುರ್ತು ಅಗತ್ಯವಾಗಿದೆ. ಸಂಚಾರ ಸುಗಮವಾಗುವಂತೆ ಮಾಡಲು, NHAI ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳೊಂದಿಗೆ ಸಂಭವನೀಯ ಪರಿಹಾರಗಳ ಬಗ್ಗೆ ಚರ್ಚಿಸಲಾಯಿತು’ ಎಂದು ಬರೆದುಕೊಂಡಿರುವ ಸಿಎನ್ ಮಂಜುನಾಥ್ ಪರಿಶೀಲನೆ ಸಂದರ್ಭದ ವಿಡಿಯೊವನ್ನೂ ಸಹ ಹಂಚಿಕೊಂಡಿದ್ದಾರೆ.