ಬೆಂಗಳೂರು: ನಾನು ಸಿಎಂ ಕುರ್ಚಿ ಹಾಗೂ ಪಕ್ಷಕ್ಕೆ ಸದಾ ನಿಷ್ಠನಾಗಿರುತ್ತೇನೆ. ಮುಖ್ಯಮಂತ್ರಿಗಳು ಹೇಳಿದ ಮೇಲೆ ಅದೇ ಅಂತಿಮ. ಅದರ ಬಗ್ಗೆ ಮರುಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ನಗರದಲ್ಲಿ ಬುಧುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಿಎಂ ಹುದ್ದೆ ವಿಚಾರವಾಗಿ ಯಾವುದೇ ಒಪ್ಪಂದವಾಗಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಮುಖ್ಯಮಂತ್ರಿಗಳು ಹೇಳಿದ ಮೇಲೆ ಯಾವುದೇ ತಕರಾರು ಇಲ್ಲ. ಅವರು ಹೇಳಿದ್ದೇ ಅಂತಿಮ. ಅವರ ಹೇಳಿಕೆ ನಂತರ ಈ ವಿಚಾರವಾಗಿ ಯಾವುದೇ ವಾದ, ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುಡಾದಲ್ಲಿ ಹುರುಳಿಲ್ಲ ಎಂದು ಸಾಬೀತು
ಮೂಡಾ ಪ್ರಕರಣ ವಿಚಾರವಾಗಿ ಲೋಕಾಯುಕ್ತಕ್ಕೆ ಇಡಿ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, ಯಾವುದೇ ತನಿಖೆ ನಡೆದರೂ ಅದು ಗೌಪ್ಯವಾಗಿರಬೇಕು. ಏನಾದರೂ ಸತ್ಯಾಂಶವಿದ್ದರೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಬೇಕು. ನ್ಯಾಯಾಲಯಕ್ಕೆ ಸಲ್ಲಿಸುವ ಬದಲು ಮಾಧ್ಯಮಗಳಿಗೆ ನೀಡುತ್ತಾರೆ ಎಂದರೆ, ಅವರು ಈ ವಿಚಾರದಲ್ಲಿ ಎಷ್ಟು ಹತಾಶರಾಗಿದ್ದಾರೆ ಎಂಬುದಕ್ಕೆ ಸಾಕ್ಷಿ. ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂಬುದು ಸಾಬೀತಾಗುತ್ತಿದೆ. ಆದರೂ ಚಿಂತೆ ಇಲ್ಲ. ನಮ್ಮ ಕರ್ತವ್ಯ, ನಮ್ಮ ಸರ್ಕಾರ ಹಾಗೂ ಪಕ್ಷ ಹೋರಾಟ ಮಾಡುತ್ತದೆ. ನಮಗೆ ನ್ಯಾಯಾಲಯಗಳ ಮೇಲೆ ನಂಬಿಕೆ ಇದೆ” ಎಂದು ತಿಳಿಸಿದರು.