ಬೆಂಗಳೂರು: ರಾಜ್ಯದಲ್ಲಿ ಮುಂದಿನ ಚುನಾವಣೆವರೆಗೂ ನಾನೇ ಸಿಎಂ ಆಗಿರುತ್ತೇನೆ. ಮುಂದಿನ ಚುನಾವಣೆಯಲ್ಲಿಯೂ ನಮ್ಮದೇ ಸರ್ಕಾರ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು(ಮಾರ್ಚ್.12) ಕಾಂಗ್ರೆಸ್ ಕಾರ್ಯಕರ್ತರಿಗೆ ವೇತನ ನೀಡುವ ಕುರಿತು ವಿಪಕ್ಷಗಳು ಚರ್ಚಿಸುವ ವೇಳೆ ಆರ್.ಅಶೋಕ್ ಅವರ ಹೇಳಿಕೆ ತಿರುಗೇಟು ನೀಡಿದ ಸಿಎಂ, 5 ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಮುಂದಿನ ಐದು ವರ್ಷಗಳು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಟಾಂಗ್ ನೀಡಿದ್ದಾರೆ.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಚಿಸಿ ಅದಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಿಸಿ, ಅವರಿಗೆ ಸರ್ಕಾರದಿಂದ ವೇತನ ನೀಡುತ್ತಿರುವುದಕ್ಕೆ ವಿಪಕ್ಷಗಳಿಂದ ಆಕ್ಷೇಪ, ವಿರೋಧ ವ್ಯಕ್ತವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ ಅವರು, ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಧಿವೇಶನ ಮುಗಿಯುತ್ತಿದ್ದಂತೆ ಈ ಬಗ್ಗೆ ಸಭೆ ಕರೆದು ತಕರಾರುಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಪಕ್ಷದ ಕಾರ್ಯಕರ್ತರಿಗೆ ಅಧಿಕಾರದಲ್ಲಿ ಅವಕಾಶ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇನ್ನೂ ಮಹಾರಾಷ್ಟ್ರದಲ್ಲಿ ಎಲ್ಲಾ ಶಾಸಕರ ಕಚೇರಿಗೂ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ನೇಮಿಸಿಕೊಳ್ಳುತ್ತಿದೆ, ಅಂತೆಯೇ ಇಲ್ಲಿಯೂ ನೇಮಿಸಲಾಗಿದೆ. ಆದರೆ ಅವರಿಂದ ಯಾವುದೇ ತಾಲ್ಲೂಕುಗಳಲ್ಲೂ ಶಾಸಕರ ಘನತೆಗೆ ಮತ್ತು ಅಧಿಕಾರಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ ಎಂದರು.
ಇನ್ನು ಹಣ ದುರುಪಯೋಗ ಆಗುತ್ತದೆ ಎಂಬ ಪ್ರಶ್ನೆ ಇಲ್ಲ. ನಾವು ಶಾಸಕ, ಎಂಎಲ್ಸಿಗಳ ಹಕ್ಕು ಮೊಟಕು ಮಾಡಿಲ್ಲ. ಶಾಸಕರಿಗೆ ಅಗೌರವ ಮಾಡುವ ಕೆಲಸ ಆಗಲ್ಲ. ಸ್ವತ: ನಾನೂ ಕೂಡ ಶಾಸಕ ಎಂದು ಉತ್ತರಿಸಿದ್ದಾರೆ. ಅಲ್ಲದೇ ಮಹಾರಾಷ್ಟ್ರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಪಿಎಗಳಾಗಿ ಮಾಡಿಲ್ವಾ? ಎಂದು ತಿರುಗೇಟು ನೀಡಿದ್ದಾರೆ.





