ಬೆಂಗಳೂರು : ಸಚಿವ ಸಂಪುಟ ಸಭೆಯ ಬಳಿಕ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಲ್ಲಿ ಪ್ರವಾಸ ಕೈಗೊಂಡ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುರುವಾರ ತಮ್ಮೆಲ್ಲಾ ಕಾರ್ಯಕ್ರಮಗಳನ್ನು ರದ್ದು ಗೊಳಿಸಿ ಸಾರ್ವಜನಿಕರ ಭೇಟಿಯಿಂದಲೂ ಹಿಂದೆ ಸರಿದಿದ್ದು ಚರ್ಚೆಗೆ ಗ್ರಾಸವಾಗಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ದಿಲ್ಲಿಯಲ್ಲಿ ಇಂಡಿಯಾ ರಾಜಕೀಯ ಒಕ್ಕೂಟದ ಮುಖಂಡರಿಗೆ ಔತಣಕೂಟ ಆಯೋಜಿಸಿದ್ದರು. ಈ ಔತಣಕೂಟಕ್ಕೆ ರಾಹುಲ್‌ಗಾಂಧಿ ಖುದ್ದು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು, ಸಚಿವ ಸಂಪುಟ ಸಭೆಯ ಬಳಿಕ ದಿಲ್ಲಿಗೆ ತೆರಳಿದರು. ಡಿ.ಕೆ. ಶಿವಕುಮಾರ್ ಅವರಿಗೆ ಔತಣಕೂಟಕ್ಕೆ ಆಹ್ವಾನವಿಲ್ಲದೇ ಇರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಶುಕ್ರವಾರ ಬೆಂಗಳೂರಿನಲ್ಲಿ ನಡೆಯುವ ಮತಗಳ್ಳತನದ ವಿರುದ್ಧ, ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಅದರ ಕುರಿತು ಇಂಡಿಯಾ ಕೂಟದ ಮುಖಂಡರಿಗೆ ರಾಹುಲ್‌ಗಾಂಧಿ ಮಾಹಿತಿ ನೀಡಲಿದ್ದಾರೆ.
ರಾಹುಲ್‌ಗಾಂಧಿ ಅವರ ಪ್ರತಿಭಟನೆಯ ಪೂರ್ವ ತಯಾರಿಯ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ಅತೀವ ಕಾಳಜಿ ವಹಿಸಿದ್ದು, ಯಾವುದೇ ಲೋಪಗಳಾಗಬಾರದು ಎಂಬ ಕಾರಣಕ್ಕೆ ಪದೇ-ಪದೇ ಸ್ಥಳ ಪರಿಶೀಲನೆ ನಡೆಸುವ ಮೂಲಕ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.
ಅನಾರೋಗ್ಯದ ನಡುವೆಯೂ ಡಿ.ಕೆ.ಶಿವಕುಮಾರ್ ಅವರ ಪಕ್ಷದ ಬದ್ಧತೆ ಸಾರ್ವಜನಿಕ ವಲಯದಲ್ಲಿ ಪ್ರಸಂಶೆಗೆ ಪಾತ್ರವಾಗಿದೆ. ಪ್ರತಿಭಟನೆಯ ಪೂರ್ವ ತಯಾರಿ ನಡುವೆಯು ಕೂಡ ಗುರುವಾರ ಮಧ್ಯಾಹ್ನ ಡಿ.ಕೆ. ಶಿವಕುಮಾರ್ ತೆಲಂಗಾಣ ರಾಜ್ಯ ಪ್ರವಾಸಕ್ಕಾಗಿ ಹೈದರಾಬಾದ್‌ಗೆ ತೆರಳಬೇಕಿತ್ತು. ಆದರೆ ಬೆಳಿಗ್ಗೆ ಇದ್ದಕ್ಕಿಂದ್ದಂತೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.
ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ನಾನು ಸಕ್ರಿಯನಾಗಿರುವುದರಿಂದ ಸಾರ್ವಜನಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇಂದಿನಿಂದ ಆ. 10ರ ವರೆಗೂ ಯಾರನ್ನೂ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಯಾರೂ ತಪ್ಪು ತಿಳಿಯಬಾರದು ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ.





