Mysore
14
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಸಿಎಂ ಸಿದ್ದರಾಮಯ್ಯ ತನಿಖೆ ಎದುರಿಸಲಿ, ಅವರು ಕ್ಲೀನ್ ಅಲ್ಲ: ಆರ್‌ ಅಶೋಕ್‌

ಬೆಂಗಳೂರು: ಮುಡಾ ಹಗರಣ ನಡೆಸಿದ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಸೋಮವಾರ ಬೆಳಗ್ಗೆ 11.30 ಕ್ಕೆ ಪ್ರತಿಭಟಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು (ಆಗಸ್ಟ್ 18) ಮಾತನಾಡಿದ ಅವರು, ಕಾಂಗ್ರೆಸ್ ನಡಿಗೆ, ಭ್ರಷ್ಟಾಚಾರದ ಕಡೆಗೆ ಎಂಬಂತಾಗಿದೆ. ಈ ಸರ್ಕಾರ ಬಂದಾಗ ಜನರು ಗ್ಯಾರಂಟಿಗಳ ಬಗ್ಗೆ ಭರವಸೆ ಇಟ್ಟುಕೊಂಡಿದ್ದರು. ಆದರೆ ಜನರ ಅಪೇಕ್ಷೆಗೆ ವಿರುದ್ಧವಾಗಿ ಸರ್ಕಾರ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ 65 ಕೇಸುಗಳಿದ್ದು, ಅದನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ. ಅಂದಮೇಲೆ ಅವರು ಹೇಗೆ ಕ್ಲೀನ್ ಎನ್ನುವುದು ತಿಳಿದಿಲ್ಲ. ಈಗ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದನ್ನು ಕಾಂಗ್ರೆಸ್ ಸ್ವಾಗತ ಮಾಡಬೇಕಿತ್ತು‌. ತನಿಖೆಯಾಗಿ ಸ್ವಚ್ಛವಾಗಿ ಹೊರಬಂದರೆ ಕ್ಲೀನ್ ಎಂದು ನಂಬಬಹುದು. ಅದನ್ನು ಬಿಟ್ಟು ರಾಜ್ಯಾದ್ಯಂತ ಹೋರಾಟ ಮಾಡಲು ಮುಂದಾಗಿದ್ದಾರೆ ಎಂದು ಆಡಳಿತ ಪಕ್ಷದ ವಿರುದ್ಧ ದೂರಿದರು.

ಸಿಎಂ ಸಿದ್ದರಾಮಯ್ಯ ಅಧಿವೇಶನದಲ್ಲಿ ಉತ್ತರ ಕೊಡದೆ ಪಲಾಯನ ಮಾಡಿದ್ದಾರೆ. ಜೊತೆಗೆ ಪ್ರಕರಣ ಮುಚ್ಚಿಹಾಕಲು ಬೇಕಾದವರನ್ನು ನೇಮಿಸಿದ್ದಾರೆ. ಹೈಕಮಾಂಡ್ ಕೂಡ ಸಿದ್ದರಾಮಯ್ಯ ಅವರ ಭ್ರಷ್ಟಾಚಾರವನ್ನು ಬೆಂಬಲಿಸಿದೆ. ಯಾವ ನೈತಿಕತೆ ಇಟ್ಟುಕೊಂಡು ಇವರು ಹೋರಾಟ ಮಾಡುತ್ತಾರೆ? ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಸರ್ಕಾರ, ದೆಹಲಿ ಹೈಕಮಾಂಡ್ಗೆ ಎಟಿಎಂ ಆಗಿದೆ‌. ಬಿ.ಎಸ್ ಯಡಿಯೂರಪ್ಪ ಅವರ ಮೇಲೆ ಆರೋಪ ಬಂದಾಗ, ಎಲ್.ಕೆ.ಅಡ್ವಾಣಿ ಮೇಲೆ ಆರೋಪ ಬಂದಾಗ ರಾಜೀನಾಮೆ ಪಡೆಯಲಾಗಿತ್ತು. ಆದರೆ ಈ ಪರಂಪರೆ ಕಾಂಗ್ರೆಸ್ ಗಿಲ್ಲ. ಕಾಂಗ್ರೆಸ್ ನಾಯಕರು ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ಅಜೆಂಡಾವೇ ಭ್ರಷ್ಟಾಚಾರ ಎಂದರು.

ಈಗ ಕಾಂಗ್ರೆಸ್ ಪಕ್ಷದ ಸರ್ಕಾರವೇ ಇದೆ. ಆದ್ದರಿಂದ ಯಾವುದೇ ಪ್ರಕರಣದ ತನಿಖೆ ಬೇಕಾದರೂ ಮಾಡಲಿ. ಮುಡಾ ಹಗರಣದಲ್ಲಿ ನಾನು ಯಾವುದಕ್ಕೂ ಸಹಿ ಹಾಕಿಲ್ಲ, ದಾಖಲೆ ನೋಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಅವರೇ 62 ಕೋಟಿ ರೂ. ಕೊಡಿ ಎಂದು ಹೇಳಿರುವಾಗ ಅದಕ್ಕಿಂತ ದೊಡ್ಡ ಸಾಕ್ಷಿ ಬೇಡ. ಸಿದ್ದರಾಮಯ್ಯ ಈಗ ಕಾನೂನಿಗೆ ತಲೆ ಬಾಗಬೇಕು. ಯಡಿಯೂರಪ್ಪ ಪ್ರಕರಣವೇ ಬೇರೆ, ಸಿದ್ದರಾಮಯ್ಯ ಪ್ರಕರಣವೇ ಬೇರೆ ಎಂದು ಕಾಂಗ್ರೆಸ್ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಒಳಗೊಂದು ಹೊರಗೊಂದು ಎಂಬಂತೆ ಇದ್ದಾರೆ. ತಾವು ಸಿಎಂ ಆಗಬೇಕೆಂದೇ ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಯಾರಾಗಬೇಕೆಂಬುದು ಅವರ ಪಕ್ಷಕ್ಕೆ ಬಿಟ್ಟ ನಿರ್ಧಾರ. ಮಲ್ಲಿಕಾರ್ಜುನ ಖರ್ಗೆಯವರು ಸುದೀರ್ಘ ರಾಜಕೀಯ ಹಿನ್ನೆಲೆ ಹಾಗೂ ಕಾನೂನು ಪ್ರಕಾರ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹೇಳಿರುವುದು ಸರಿ ಇದೆ ಎಂದರು.

Tags:
error: Content is protected !!