ಬೆಂಗಳೂರು : ವಿಕಲಚೇತನರು ಸಮಾಜಕ್ಕೆ ಹೊರೆಯಲ್ಲ, ಅವರು ಸಮಾಜದ ಆಸ್ತಿಯಾಗಿದ್ದಾರೆ. ಅವರ
ಸಬಲೀಕರಣಕ್ಕಾಗಿ ಯಾವಾಗಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖಾ ವತಿಯಿಂದ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು(ಡಿ.3) ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಎಲ್ಲರಿಗೂ ಬದುಕುವ ಅವಕಾಶವಿದೆ. ಅವರ ಶ್ರೇಯೋಭಿವೃದ್ಧಿಗಾಗಿ ಪ್ರಸಕ್ತ ಸಾಲಿನ ಪೂರಕ ಅಂದಾಜಿನಲ್ಲಿ 44 ಕೋಟಿಗಳನ್ನು ಮಂಜೂರು ಮಾಡಲಾಗುವುದು ಎಂದಿದ್ದಾರೆ.
ರಾಜ್ಯದಲ್ಲಿ ಸುಮಾರು 15 ಲಕ್ಷ ವಿಕಲಚೇತನರಿದ್ದಾರೆ. ಅವರೆಲ್ಲರ ಆರೈಕೆ ಮಾಡಿ ವಿಶೇಷ ಸೌಲಭ್ಯಗಳನ್ನು ನೀಡುವುದು ಸರ್ಕಾರದ ಕರ್ತವ್ಯ. ಸಂವಿಧಾನದಲ್ಲಿ ಎಲ್ಲರೂ ಬದುಕುವ , ಉದ್ಯೋಗ ಪಡೆಯುವಂತಹ ಅವಕಾಶವನ್ನು ಕಲ್ಪಿಸಿದೆ. ವಿಕಲಚೇತನರು ಸಮಾಜಕ್ಕೆ ಹೊರೆಯಲ್ಲ, ಅವರು ಸಮಾಜದ ಆಸ್ತಿಯಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಪ್ಯಾರಾ ಒಲಂಪಿಕ್ಸ್ ನಲ್ಲಿ ಭಾರತದ ವಿಕಲಚೇತನ ಕ್ರೀಡಾಪಟುಗಳು ಹೆಚ್ಚಿನ ಪದಕಗಳನ್ನು ಪಡೆದಿರುವುದು ಹೆಮ್ಮೆಯ ವಿಚಾರ. ನಮ್ಮ ಸರ್ಕಾರ ಈ ಬಾರಿ ವಿಶ್ವ ವಿಕಲಚೇತನರ ದಿನಾಚರಣೆಯನ್ನು “ಸಮಗ್ರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವದ ಉತ್ತೇಜನ” ಎಂಬ ಘೋಷ ವಾಕ್ಯದೊಂದಿಗೆ ಆಚರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.





