Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ವಿದ್ಯಾರ್ಥಿಗಳಿಗೆ ಸಂವಿಧಾನ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಂವಿಧಾನದಲ್ಲಿ ಕಂದಾಚಾರಗಳಿಗೆ ಅವಕಾಶವಿಲ್ಲ. ಅದು ಕೇವಲ ಒಂದು ಜಾತಿ ಅಥವಾ ಒಂದು ಧರ್ಮಕ್ಕೆ ಮಾತ್ರ ಸೀಮಿತವಲ್ಲ, ಈ ದೇಶಕ್ಕೆ ಸೀಮಿತವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು(ಡಿ.3) ಸಂವಿಧಾನ ಓದು ಅಭಿಯಾನ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಭಾರತ ಬಹುತ್ವದ ದೇಶ. ಎಲ್ಲಾ ಜಾತಿ, ಧರ್ಮದವರಿಗೆ ಸಮಾನವಾಗಿ ನಡೆಸಿಕೊಳ್ಳುವುದು ನಮ್ಮ ದೇಶದ ಗುಣ. ಇದೇ ಸಂವಿಧಾನದ ಮೌಲ್ಯ. ಸಂವಿಧಾನದ ಬಗ್ಗೆ ಗೌರವ ಇಲ್ಲದವರ ಕೈಗೆ ಹೋದರೆ, ಎಷ್ಟೇ ಒಳ್ಳೆ ಸಂವಿಧಾನ ಆದರೂ ಪರಿಣಾಮ ಕೆಟ್ಟದಾಗಿರುತ್ತದೆ ಎಂದಿದ್ದಾರೆ.

ಸಂವಿಧಾನದ ಶ್ರೇಷ್ಠತೆ ಮತ್ತು ವಿಫಲತೆ ಅದು ಯಾರ ಕೈಯಲ್ಲಿದೆ ಎನ್ನುವವರ ಆಧಾರದ ಮೇಲೆ ನಿರ್ಧಾರವಾಗುತ್ತದೆ ಎನ್ನುವ ಅಂಬೇಡ್ಕರ್ ಅವರ ಮಾತು ಹಾಗೂ ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಕುವೆಂಪು ಅವರ ಮಾತುಗಳನ್ನು ಉಲ್ಲೇಖಿಸಿ ಪಾಠ ಮುಂದುವರೆಸಿದ್ದಾರೆ.

ನಮ್ಮ ದೇಶದ ಸಂವಿಧಾನದ ಪೀಠಿಕೆಯಲ್ಲಿ ಇಡೀ ಸಂವಿಧಾನದ ಸಾರಾಂಶ ಇದೆ. ಜಾತ್ಯತೀತತೆ, ಸಾಮಾಜಿಕ ನ್ಯಾಯ ಎರಡೂ ಮೂಲ ಸಂವಿಧಾನದಲ್ಲಿ ಇರಲಿಲ್ಲ. ಬಳಿಕ 42ನೇ ತಿದ್ದುಪಡಿಯ ಮೂಲಕ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಕಾಲದಲ್ಲಿ ಸೇರ್ಪಡೆಯಾಯಿತು. ಅದನ್ನು ತೆಗೆಯಬೇಕು ಎಂದು ಕೆಲವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ ಸುಪ್ರೀಂಕೋರ್ಟ್ ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಿತು. ಭಾರತದಲ್ಲಿ ಅಸಮಾನತೆ ಸೃಷ್ಟಿಯಾಗಿದ್ದು ಜಾತಿ ವ್ಯವಸ್ಥೆಯಿಂದ. ಈ ಜಾತಿ ಆಧಾರದ ಮೇಲೆ ಒಬ್ಬರ ಯೋಗ್ಯತೆ ಅಳೆಯುವುದು ಅನಾಗರಿಕತನ ಎಂದು ಹೇಳಿದ್ದಾರೆ.

ನಮ್ಮ ಸಂವಿಧಾನದ ಹಕ್ಕುಗಳು ಏನೇನು ಅಂತ ಗೊತ್ತಿದ್ದರೆ ಮಾತ್ರ ಅವುಗಳನ್ನು ಪಡೆದುಕೊಳ್ಳಬಹುದು. ಏಳು ಸ್ವಾತಂತ್ರ್ಯಗಳನ್ನು ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ನೀಡಿದೆ. ಇದನ್ನೆಲ್ಲಾ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಅಲ್ಲದೇ ಸಂವಿಧಾನದ ಧ್ಯೇಯೋದ್ದೇಶ ಹಾಗೂ ಆಶಯಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ತಿಳಿಸಿದ್ದಾರೆ.

 

Tags: