ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ತಮ್ಮ ತವರು ಕ್ಷೇತ್ರ ವರುಣಾದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡುತ್ತಿರುವಾಗ ವರುಣಾದಲ್ಲಿ 60 ಸಾವಿರ ಲೀಡ್ ಬೇಕು, ಅಷ್ಟು ಲೀಡ್ ಬಂದಿದ್ದೇ ಆದರೆ ಯಾರು ನನ್ನನ್ನು ಮುಟ್ಟಲು ಸಾಧ್ಯವಿಲ್ಲ, ನಾನು ಇರಬೇಕೋ, ಬೇಡ್ವೋ ಎಂದು ಹೇಳಿದ್ದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
ಈ ಬಗ್ಗೆ ಇಂದು ಮೈಸೂರಿನ ತಮ್ಮ ಟಿ.ಕೆ ಲೇಔಟ್ ಮನೆ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮತನಾಡುವಾಗ ಸ್ಪಷ್ಟನೆ ನೀಡಿದ ಅವರು, ಅದೇನು ಭಾವನಾತ್ಮಕ ಅಲ್ಲ. ಹೆಚ್ಚು ಲೀಡ್ ಬೇಕು ಎಂದು ಸ್ವಕ್ಷೇತ್ರದವರನ್ನು ಕೇಳಿದ್ದೇನೆ ಅಷ್ಟೇ. ಕಳೆದ ಚುನಾವಣೆಯಲ್ಲಿ ನಮಗೆ 48 ಸಾವಿರ ಲೀಡ್ ಬಂದಿತ್ತು. ಈ ಬಾರಿ ಅದನ್ನು 60 ಸಾವಿರಕ್ಕೆ ಮುಟ್ಟಿಸಿ ಎಂದು ಹೇಳಿದ್ದೇನೆ. ಅದಕ್ಕೆ ಬೇರೆ ರೀತಿಯ ವಿಶ್ಲೇಷಣೆ ಬೇಡ ಎಂದಿದ್ದಾರೆ.
ಅದು ನನ್ನ ಸಹಜವಾದ ಮಾತುಗಳು ಅಷ್ಟೇ. ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರಗಳು ಮಾತ್ರವಲ್ಲ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ವಿಚಾರದಲ್ಲೂ ನಾನು ಗಂಭೀರವಾಗಿದ್ದೇನೆ. ಮತ್ತೊಂದು ಬಾರಿ ಈ ಭಾಗಕ್ಕೆ ಪ್ರವಾಸ ಬರುತ್ತೇನೆ. ಬಿಜೆಪಿಯವರು ಬಂದರೆ ಬಡವರ ಕಾರ್ಯಕ್ರಮಗಳು ನಿಂತು ಹೋಗುತ್ತವೆ. ಹೀಗಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಹೆಚ್ಚು ಲೀಡ್ ಕೊಡಿ ಎಂದು ಕೇಳಿಕೊಂಡಿದ್ದೇನೆ ಎಂದರು.