ಬೆಂಗಳೂರು: ನಮ್ಮ ರಾಜ್ಯದ ಈ ಬಾರಿಯ ಬಜೆಟ್ ದೇಶದಲ್ಲಿಯೇ 5ನೇ ದೊಡ್ಡ ಬಜೆಟ್ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು(ಮಾರ್ಚ್.21) ಬಜೆಟ್ ಮೇಲಿನ ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ಅವರು, 2025-26ನೇ ಸಾಲಿನಲ್ಲಿ 4,09,549 ಕೋಟಿ ರೂ. ಗಾತ್ರದ ಬಜೆಟ್ ಅನ್ನು ನಾನು ಮಂಡಿಸಿದ್ದೇನೆ. 2024-25ನೇ ಸಾಲಿನ ಆಯವ್ಯಯಕ್ಕೆ ಹೋಲಿಸಿದರೆ 2025-26ನೇ ಸಾಲಿನಲ್ಲಿ ನಮ್ಮ ರಾಜ್ಯದ ಬಜೆಟ್ ಗಾತ್ರ ಶೇ.10.3 ರಷ್ಟು ಹೆಚ್ಚಿನ ಬೆಳವಣಿಗೆ ಕಂಡಿದೆ. ಜನಸಂಖ್ಯೆಯ ಗಾತ್ರದಲ್ಲಿ ಕರ್ನಾಟಕವು 8ನೇ ಸ್ಥಾನದಲ್ಲಿದೆ ಎಂದರು.
ತೆರಿಗೆ ಸಂಗ್ರಹಿಸಿಕೊಡುವ ವಿಚಾರದಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ. ಜಿಎಸ್‌ಡಿಪಿಯಲ್ಲಿ ಕರ್ನಾಟಕವು ಮಹಾರಾಷ್ಟ್ರ, ತಮಿಳುನಾಡಿನ ನಂತರ 3ನೇ ಸ್ಥಾನದಲ್ಲಿದೆ. ಆದರೆ, 2025-26ನೇ ಸಾಲಿನ ನಮ್ಮ ಬಜೆಟ್ ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡಿನ ನಂತರ 5ನೇ ದೊಡ್ಡ ಬಜೆಟ್ ಆಗಿದೆ ಎಂದು ಹೇಳಿದರು.
ಇನ್ನು, 2025-26ನೇ ಸಾಲಿಗೆ ಸಂಬಂಧಿಸಿದಂತೆ ಕೇಂದ್ರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಗಾತ್ರ 50.65 ಲಕ್ಷ ಕೋಟಿ ರೂ. 2024-25 ರಲ್ಲಿ 48.21 ಲಕ್ಷ ಕೋಟಿ ರೂ.ಗಳಷ್ಟಿತ್ತು. ಕೇಂದ್ರದ ಬಜೆಟ್ ಬೆಳವಣಿಗೆ ಶೇ. 5.06 ರಷ್ಟು ಮಾತ್ರ. ಇದರಲ್ಲಿ ಹಣದುಬ್ಬರವನ್ನು ಕಳೆದರೆ, ಕೇಂದ್ರದ ಬಜೆಟ್ಟಿನ ಗಾತ್ರ ನಕಾರಾತ್ಮಕವಾಗುತ್ತದೆ ಎಂದು ತಿಳಿಸಿದರು.





