ಬೆಂಗಳೂರು: ಸಿಎಂ ಸಿದ್ದರಾಮಯ್ಯ ಬರುವ ಡಿಸೆಂಬರ್.5ರಂದು ಹಾಸನದಲ್ಲಿ ಅಹಿಂದ ಸಮಾವೇಶ ನಡೆಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಅಹಿಂದ ಅಸ್ತ್ರವನ್ನು ಜನತೆಯ ಮುಂದೆ ಪ್ರದರ್ಶಿಸುತ್ತಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ತವರು ಜಿಲ್ಲೆ ಹಾಸನದಲ್ಲೇ ವಿಪಕ್ಷಗಳಿಗೆ ಟಕ್ಕರೆ ಕೊಡಲು ಮುಂದಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ಎಚ್.ಸಿ.ಮಹದೇವಪ್ಪ ಅವರಿಗೆ ಈ ಸಮಾವೇಶದ ಉಸ್ತುವಾರಿಯನ್ನು ಹಂಚಿಕೆ ಮಾಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಖುದ್ದು ಸಿಎಂ ಸಿದ್ದರಾಮಯ್ಯನವರೇ ಮೈಸೂರು, ಮಂಡ್ಯ, ಕೊಡಗು, ಹಾಸನ ಹಾಗೂ ಚಾಮರಾಜನಗರವನ್ನೊಳಗೊಂಡ ಐದು ಜಿಲ್ಲೆಗಳನ್ನು ಒಗ್ಗೂಡಿಸಿ ಸಮಾವೇಶವನ್ನು ಆಯೋಜಿಸುವಂತೆ ಸಚಿವರಿಗೆ ಕರೆ ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ.
ರಾಜ್ಯದಲ್ಲಿ ಏನಾದರೂ ಆಗಲಿ ಅಹಿಂದ ಶಕ್ತಿ ಪ್ರದರ್ಶನ ಮಾಡಲೇಬೇಕೆಂದು ಪಣ ತೊಟ್ಟು ನಿಂತಿರುವ ಸಿದ್ದರಾಮಯ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ನವೆಂಬರ್.20ರಂದು ದೆಹಲಿಗೆ ತೆರಳಿ ಹೈಕಮಾಂಡ್ ಅನುಮತಿ ಪಡೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.





