ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ರೋಗಿಗಳ ಸಮಸ್ಯೆಗಳನ್ನು ಆಲಿಸಿದ್ದಲ್ಲದೇ, ಆಸ್ಪತ್ರೆಗಳ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.
ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಪ್ರವಾಸವನ್ನು ಹವಾಮಾನ ವೈಪರೀತ್ಯದ ಕಾರಣಕ್ಕಾಗಿ ರದ್ದುಪಡಿಸಿದ ಸಿದ್ದರಾಮಯ್ಯ ಅವರು, ತಮ್ಮೆಲ್ಲಾ ಕಾರ್ಯಕ್ರಮಗಳನ್ನು ಕಾಯ್ದಿರಿಸಿಕೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಮಧ್ಯಾಹ್ನದ ವೇಳೆಗೆ ಅನಿರೀಕ್ಷಿತವಾಗಿ ತಮ್ಮ ಕಾರ್ಯಕ್ರಮಗಳನ್ನು ಬದಲಿಸಿಕೊಂಡು ದಿಢೀರೆಂದು ಕೆ.ಆರ್.ಮಾರುಕಟ್ಟೆ ರಸ್ತೆಯಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದರು. ಈ ವೇಳೆ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವ ಶರಣಪ್ರಕಾಶ್ ಪಾಟೀಲ್ ಉಪಸ್ಥಿತರಿದ್ದರು.
ಆಸ್ಪತ್ರೆಗೆ ಭೇಟಿ ಮಾಡಿದ ಸಿಎಂ, ರೋಗಿಗಳು ಹಾಗೂ ಅವರ ಸಂಬಂಧಿಕರ ಜೊತೆ ಸಮಾಲೋಚನೆ ನಡೆಸಿದರು. ಈ ವೇಳೆ ಚಂದ್ರಾ ಲೇಔಟ್‍ನಿಂದ ಬಂದಿದ್ದ ಮಹಿಳೆಯೊಬ್ಬರು ದುಃಖಿತರಾಗಿ ತಮಗಾಗುತ್ತಿರುವ ತೊಂದರೆಯನ್ನು ಹೇಳಿಕೊಂಡಿದ್ದಲ್ಲದೆ, ಸಹಾಯ ಮಾಡುವಂತೆ ಮೊರೆಯಿಟ್ಟರು.
ಈ ವೇಳೆ ಸಿದ್ದರಾಮಯ್ಯ ಅವರ ಸರ್ಕಾರವನ್ನು ಮಹಿಳೆ ಹೊಗಳಿದ್ದು ವಿಶೇಷವಾಗಿತ್ತು. ಆಸ್ಪತ್ರೆಗೆ ತೆರಳಿದ ವೇಳೆ ಕೆಲ ಅವ್ಯವಸ್ಥೆಗಳನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ, ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆಸ್ಪತ್ರೆಗಳಿಗೆ ಅಗತ್ಯವಿರುವ ಸಲಕರಣೆಗಳು ಮತ್ತು ಅದಕ್ಕೆ ಪೂರ್ವಕವಾದ ಸಿಬ್ಬಂದಿಗಳ ನೇಮಕಾತಿಯ ಬಗ್ಗೆಯೂ ಚರ್ಚೆ ನಡೆಸಿದರು.





