Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಚುನಾವಣಾ ಆಯೋಗದ ಅನುಮತಿ ಕೇಳಿದ್ದನೇ ಜಯವೆಂದು ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ :  ಆರ್.ಅಶೋಕ ಆರೋಪ

  • ವಿಧಾನಸೌಧ ದುರ್ಬಳಕೆ, ಮುಖ್ಯ ಕಾರ್ಯದರ್ಶಿ ವಿರುದ್ಧ ದೂರು
  • ನೇಹಾ ಹತ್ಯೆ ಪ್ರಕರಣ ಸಿಬಿಐಗೆ ವಹಿಸಿ
  • ಪಿಕ್ ಪಾಕೇಟ್ ಕಾಂಗ್ರೆಸ್, ಕನ್ನಡಿಗರ ಕೈಗೆ ಚಿಪ್ಪು ಪೋಸ್ಟರ್ ಬಿಡುಗಡೆ

ಬೆಂಗಳೂರು : ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ಚುನಾವಣಾ ಆಯೋಗದ ಅನುಮತಿ ಕೇಳಿದ್ದು, ಇದನ್ನೇ ನ್ಯಾಯಾಲಯದಲ್ಲಿ ತಿಳಿಸಲಾಗಿದೆ. ಈ ವಿಷಯವನ್ನು ತಮಗೆ ಸಿಕ್ಕಿದ ಜಯ ಎಂದು ಸಿಎಂ ಸಿದ್ದರಾಮಯ್ಯ ಸುಳ್ಳು ಬಿಂಬಿಸುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆಗೆ ಅನುಮತಿಗಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಈ ಕುರಿತು ತಿಳಿಸಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆ ವೇಳೆಯೂ ಇದನ್ನು ತಿಳಿಸಲಾಗಿದೆ. ಆದರೆ ಕಾಂಗ್ರೆಸ್‌ ನಾಯಕರು ಜಯ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಹಣ ಬಿಡುಗಡೆಗಾಗಿಯೇ ಅನುಮತಿ ಕೇಳಿರುವಾಗ ಕಾಂಗ್ರೆಸ್‌ ಪಾತ್ರ ಇದರಲ್ಲಿ ಏನೂ ಇಲ್ಲ. ಜಯ ಸಿಗಲು ಕಾಂಗ್ರೆಸ್‌ನ ವಕೀಲರು ಏನೂ ವಾದ ಮಾಡಿಲ್ಲ ಎಂದರು.

ಮಲ್ಲಿಕಾರ್ಜುನ ಖರ್ಗೆ ಹಾಗೂ ಸುರ್ಜೇವಾಲಾ ಅವರು ಯಾವ ಮುಖ ಇಟ್ಟುಕೊಂಡು ಬೆಂಗಳೂರಿಗೆ ಬರುತ್ತಾರೆ? ಇಲ್ಲಿ ಬಾಂಬ್‌ ಸ್ಫೋಟ ಆಗಿರುವಾಗ ನಿಮಗೆ ಮತ ಕೇಳಲು ಯಾವ ಅಧಿಕಾರ ಇದೆ? ಕೇಂದ್ರ ಸರ್ಕಾರ ಕ್ರಮ ವಹಿಸಿದ್ದರಿಂದಲೇ ಬರ ಪರಿಹಾರ ಹಲವಾರು ರಾಜ್ಯಗಳಿಗೆ ದೊರೆಯುತ್ತಿದೆ. ಈಗಾಗಲೇ ಬರ ಪರಿಹಾರವನ್ನು ರಾಜ್ಯ ಸರ್ಕಾರದ ವತಿಯಿಂದ ನೀಡಬೇಕಿತ್ತು. ಎಸ್‌ಡಿಆರ್‌ಎಫ್‌ನಿಂದ 700 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ ರಾಜ್ಯ ಸರ್ಕಾರವೇ ನೀಡಿದಂತೆ ಸಿಎಂ ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ ಎಂದರು.

2013-14 ರಲ್ಲಿ ಬರ ಪರಿಹಾರ ನೀಡಲು ಸಿಎಂ ಸಿದ್ದರಾಮಯ್ಯ 9 ತಿಂಗಳು ತೆಗೆದುಕೊಂಡಿದ್ದರು. ಕೇಂದ್ರದಲ್ಲೀಗ ಬಿಜೆಪಿ ಇದೆ ಎಂಬ ಕಾರಣಕ್ಕೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಮೋದಿ ಸರ್ಕಾರ 7,940 ಕೋಟಿ ರೂ. ಪರಿಹಾರ ನೀಡಿದ್ದರೆ, ಮನಮೋಹನ್‌ ಸಿಂಗ್‌ ಸರ್ಕಾರ 3,000 ಕೋಟಿ ರೂ. ನೀಡಿದೆ. ಗ್ಯಾರಂಟಿಗಳಿಂದಾಗಿ ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ ಎಂದರು.

ಸಿಬಿಐಗೆ ತನಿಖೆ ವಹಿಸಿ : ಕಾಂಗ್ರೆಸ್‌ ಸರ್ಕಾರ ಪಾಪರ್‌ ಆಗಿ ಬೀದಿಗೆ ಬಂದಿದ್ದು, ಮುಂದೆ ಸಂಬಳ ಕೊಡಲು ಹಣ ಇರುವುದಿಲ್ಲ. ಕಾಂಗ್ರೆಸ್‌ ವಿರುದ್ಧ ಹಿಂದೂಗಳು ಕೆರಳುತ್ತಿದ್ದಾರೆ. ಹಿಂದೂಗಳ ರಕ್ತವನ್ನು ಮತಾಂಧರು ಹರಿಸುತ್ತಿದ್ದು, ಇದನ್ನು ಮರೆಮಾಚಿಸಲು ಈ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ. ನೇಹಾ ಹತ್ಯೆಯ ತನಿಖೆಯನ್ನು ಸಿಬಿಐಗೆ ಕೊಡದೆ ಸಿಐಡಿಗೆ ನೀಡಿ ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದಾರೆ. ಅವರ ತಂದೆಯೇ ಲವ್‌ ಜಿಹಾದ್‌ ಹೇಳಿದ್ದಾರೆ. ಈ ಪ್ರಕರಣವನ್ನು ಸೂಕ್ತವಾಗಿ ತನಿಖೆ ಮಾಡಲು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಮಾಂಗಲ್ಯ ಕುರಿತು ನೀಡುವ ಹೇಳಿಕೆ ಸರಿಯಾಗಿಯೇ ಇದೆ. ಹಿಂದೆ ಮನಮೋಹನ್‌ ಸಿಂಗ್‌ ಅವರು ಮುಸ್ಲಿಮರಿಗೆ ಸಂಪತ್ತಿನ ಹಂಚಿಕೆ ಬಗ್ಗೆ ಹೇಳಿದ್ದರು ಎಂದರು.

ಇದೇ ಸಂದರ್ಭದಲ್ಲಿ ಸತ್ಯ ಸಂಗತಿ ಮರೆಮಾಚಿ ಜನರನ್ನು ವಂಚಿಸುತ್ತಿರುವ ಕಾಂಗ್ರೆಸ್ ಮುಖವಾಡ ಬಯಲು ಮಾಡುವ “ಪಿಕ್ ಪಾಕೇಟ್ ಕಾಂಗ್ರೆಸ್” ಮತ್ತು “ಕನ್ನಡಿಗರ ಕೈಗೆ ಚಿಪ್ಪು” ಪೋಸ್ಟರ್ ಗಳನ್ನು ಅಶೋಕ್ ಬಿಡುಗಡೆ ಮಾಡಿದರು.

ಚುನಾವಣಾ ಆಯೋಗಕ್ಕೆ ದೂರು : ವಿಧಾನಸೌಧದಲ್ಲಿ ಕಾಂಗ್ರೆಸ್‌ ಪ್ರತಿಭಟನೆಗೆ ಅವಕಾಶ ನೀಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪ್ರತಿಭಟಿಸಿದ ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ವಿಧಾನಸೌಧದ ಒಳಗೆ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ವಿರೋಧಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಈಗ ವಿಧಾನಸೌಧದ ಮುಂಭಾಗ ಕಾಂಗ್ರೆಸ್‌ ನಾಯಕರು ಪ್ರತಿಭಟಿಸಲು ಅವಕಾಶ ಕೊಟ್ಟ ಮುಖ್ಯ ಕಾರ್ಯದರ್ಶಿಯ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ದೂರ ನೀಡಲಾಗಿದೆ. ವಿಧಾನಸೌಧವನ್ನು ಈಗಾಗಲೇ ಮೂರು ನಾಲ್ಕು ಬಾರಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರ್‌.ಅಶೋಕ ದೂರಿದರು.

Tags: