ಕಲಬುರಗಿ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ತನಿಖೆ ಕೈಗೊಂಡು ಸತ್ಯಾಂಶ ಹೊರಗೆಳೆದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ತುಂಬಾ ಹತಾಶೆಯಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತದಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧಿಗಳನ್ನು ಹೆಣೆಯುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಮೈಸೂರಿನ ಮುಡಾದಲ್ಲಿ ತಮ್ಮ ರಾಜಕೀಯ ಅಧಿಕಾರ ಬಳಸಿಕೊಂಡು ವ್ಯವಸ್ಥಿತವಾಗಿ ಅವ್ಯವಹಾರ, ಅಕ್ರಮ ಆಸ್ತಿಗಳಿಕೆ, ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ದೂರು ಕೊಟ್ಟಿದ್ದವು. ಆದರೆ ಯಾವುದೇ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿರಲಿಲ್ಲ. ಆದರೆ ಜಾರಿ ನಿರ್ದೇಶನಾಲಯ ಈ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ರಾಜ್ಯದ ಜನತೆ ಮುಂದಿಟ್ಟದೆ. ಹಾಗಾಗಿ ಈ ಸಂಸ್ಥೆ ವಿರುದ್ಧ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರ ನಡವಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾವು ಸಾರ್ವಜನಿಕವಾಗಿ ಹೇಗಿದ್ದೇವೋ ಅನ್ನುವುದರ ಮೇಲೆ ವ್ಯಕ್ತಿತ್ವ ನಿಂತಿರುತ್ತದೆ ಇದು ನಮಗೂ ಅನ್ವಯವಾಗುತ್ತದೆ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
ಮುಂದುವರಿದು, ಸಂಘಟನೆ ಎನ್ನುವುದು ಕಾರ್ಯಕರ್ತರ ಬೆವರ ಹನಿಯಿಂದ ರೂಪುಗೊಂಡಿದೆ. ಅವರಿಗೆ ಯಾವುದೇ ನೋವಾಗದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದರು.
ಮುಖ್ಯಮಂತ್ರಿ ಸ್ಥಾನ ತಮ್ಮಲ್ಲೇ ಉಳಿಸಿಕೊಳ್ಳಲು ಸಿದ್ದರಾಮಯ್ಯ ಜನ ಕಲ್ಯಾಣ ಸಮಾವೇಶ ಮಾಡುತ್ತಿದ್ದಾರೆ. ಇದು ಕೇವಲ ಅವರ ಶಕ್ತಿ ಪ್ರದರ್ಶನ ಹೊರತು ಬೇರೆ ಏನು ಅಲ್ಲ ಎಂದು ವಾಗ್ದಾಳಿ ನಡೆಸಿದರು.