Mysore
33
scattered clouds

Social Media

ಸೋಮವಾರ, 17 ಮಾರ್ಚ್ 2025
Light
Dark

ಉದ್ಯಮಸ್ನೇಹಿ ಪರಿಷ್ಕೃತ ಏಕಗವಾಕ್ಷಿ ಪೋರ್ಟಲ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದಲ್ಲಿ ಕೈಗಾರಿಕಾ ಯೋಜನೆಗಳಿಗೆ ತ್ವರಿತ ಗತಿಯಲ್ಲಿ ಅನುಮೋದನೆ ನೀಡಬಲ್ಲ ಮತ್ತು ಉದ್ಯಮಗಳಿಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಇಲಾಖೆಗಳ 150 ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವಂತಹ ಉದ್ಯಮಸ್ನೇಹಿ ಪರಿಷ್ಕೃತ ಏಕಗವಾಕ್ಷಿ ಪೋರ್ಟಲ್ ಅನ್ನು ಸಿಎಂ ಸಿದ್ದರಾಮಯ್ಯ ಅವರು  ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ (ಫೆಬ್ರವರಿ.11) ನಡೆಯುತ್ತಿರುವ ಇನ್‌ವೆಸ್ಟ್‌ ಕರ್ನಾಟಕ-2025 ಕಾರ್ಯಕ್ರಮದಲ್ಲಿ ಉದ್ಯಮಸ್ನೇಹಿ ಪರಿಷ್ಕೃತ ಏಕಗವಾಕ್ಷಿ ಪೋರ್ಟಲ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮೈಕ್ರೋಸಾಫ್ಟ್ ಕಂಪನಿಯ ನೆರವಿನೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದ ಬಲದಿಂದ ರೂಪಿಸಿರುವ ಈ ವ್ಯವಸ್ಥೆಯು ಕೈಗಾರಿಕಾ ಯೋಜನೆಗಳಿಗೆ ಸಂಬಂಧಿಸಿದ ಅನುಮೋದನೆ, ನವೀಕರಣ, ತಿದ್ದುಪಡಿ, ಕುಂದುಕೊರತೆಗಳಿಗೆ ಪರಿಹಾರಗಳನ್ನು ಸರಳಗೊಳಿಸಲಿದೆ. ಅಲ್ಲದೇ ಕ್ಷಿಪ್ರಗತಿಯಲ್ಲಿ ಹೂಡಿಕೆ ನನಸಾಗುವಂತೆ ಮಾಡಲಿದೆ. ಜೊತೆಗೆ ಹೂಡಿಕೆದಾರರಿಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಿಗಬೇಕಾದ ಸೇವೆಗಳನ್ನು ಯಾವುದೇ ಅಧಿಕಾರಿಶಾಹಿಯ ಅಡೆತಡೆಯಿಲ್ಲದೆ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ಇದೇ ವೇಳೆ ಈ ಕುರಿತು ಸಚಿವ ಎಂ.ಬಿ.ಪಾಟೀಲ್‌ ಅವರು ಅಧಿಕ ಮಾಹಿತಿ ನೀಡಿದ್ದು, ಇದುವರೆಗೂ ಕೈಗಾರಿಕಾ ಯೋಜನೆಗಳಿಗೆ ಸಂಬಂಧಿಸಿದ ಸೇವೆಗಳು ಬೇರೆಬೇರೆ ಇಲಾಖೆಗಳಲ್ಲಿ ಚದುರಿ ಹೋಗಿದ್ದವು. ಇದರಿಂದ ಎಲ್ಲವೂ ಮಂದಗತಿಗೆ ಸಿಲುಕಿ ಸ್ತಬ್ಧವಾಗುತ್ತಿದ್ದವು. ಆದರೆ ಇದೀಗ ರಾಜ್ಯ ಸರ್ಕಾರದ 30 ಇಲಾಖೆಗಳ ಎಲ್ಲ ಸೇವೆಗಳನ್ನೂ ಒಂದೆಡೆ ತರಲಾಗಿದೆ. ಅಲ್ಲದೇ ಕೃತಕ ಬುದ್ಧಿಮತ್ತೆಯನ್ನು ಆಧರಿಸಿ ವಿನ್ಯಾಸಗೊಳಿಸಿರುವ ಚಾಟ್-ಬಾಟ್ ಸೌಲಭ್ಯದಲ್ಲಿ ಉದ್ಯಮಿಗಳು ತಮಗೆ ಬೇಕಾದ ಸೇವೆ ಹಾಗೂ ಮಾಹಿತಿಗಳನ್ನು ತಮ್ಮ ಇಷ್ಟದ ಭಾಷೆಯಲ್ಲಿ ಬೆರಳತುದಿಯಲ್ಲೇ ಪಡೆದುಕೊಳ್ಳಬಹುದು. ಈ ಸೇವೆಗಳು ಮೊಬೈಲ್‌ ಫೋನ್‌ನಲ್ಲಿ ಸಹ ಸಿಗಲಿವೆ ಎಂದು ಮಾಹಿತಿ ನೀಡಿದ್ದಾರೆ.

ಈ ಏಕಗವಾಕ್ಷಿ ವ್ಯವಸ್ಥೆ ಅಡಿಯಲ್ಲಿ ಕರ್ನಾಟಕ ಉದ್ಯೋಗ ಮಿತ್ರದ ಮೂಲಕ ಹೂಡಿಕೆದಾರರಿಗೆ ಪ್ರಮಾಣಪತ್ರ ಆಧರಿತ ಅನುಮೋದನೆ ನೀಡಲಾಗುವುದು. ಉದ್ಯಮಿಗಳು ಅನುಮೋದನೆಗಳಿಗೆ ಕಾಯದೆ, ತಕ್ಷಣವೇ ಕಟ್ಟಡ ಕಾಮಗಾರಿ ಹಾಗೂ ಇತರೆ ಸಿದ್ಧತೆ ಆರಂಭಿಸಬಹುದು. ಹೀಗಾಗಿ ಈ ವ್ಯವಸ್ಥೆಯನ್ನು ರಾಷ್ಟ್ರ ಮಟ್ಟದ ಏಕಗವಾಕ್ಷಿ ವ್ಯವಸ್ಥೆಯೊಂದಿಗೆ ಬೆಸೆಯಲಾಗಿದೆ. ಜೊತೆಗೆ ಈ ಪೋರ್ಟಲ್‌ನಲ್ಲಿ ಕೈಗಾರಿಕೆಗೆ ಬೇಕಾದ ಭೂಮಿಯ ಹುಡುಕಾಟ, ಮಂಜೂರಾತಿ, ಕಟ್ಟಡದ ನಕಾಶೆಗೆ ಅನುಮೋದನೆ ಮತ್ತು ಕೆಐಎಡಿಬಿ ಸೇವೆಗಳೂ ಸಿಗಲಿವೆ ಎಂದು ತಿಳಿಸಿದ್ದಾರೆ.

ಇನ್ನೂ ಹೊಸ ವ್ಯವಸ್ಥೆಯಲ್ಲಿ ಜಿಐಎಸ್ ಆಧರಿತ ಕೈಗಾರಿಕಾ ಮಾಹಿತಿಯನ್ನು ಒದಗಿಸಲಾಗುವುದು. ಕೈಗಾರಿಕೆಗೆ ತಮ್ಮ ಸ್ವಂತ ಅಥವಾ ಕಂದಾಯ ಭೂಮಿಯನ್ನು ಉಪಯೋಗಿಸಿಕೊಳ್ಳುವವರಿಗೆ ಇದು ಅನುಕೂಲವಾಗಲಿದೆ. ಅಲ್ಲದೇ ನಿರಾಕ್ಷೇಪಣಾ ಪತ್ರ ಇತ್ಯಾದಿಗಳಿಗೆ ವಿಝರ್ಡ್ ತಂತ್ರಜ್ಞಾನವನ್ನುಳ್ಳ ಸಾಧನ ಇದರಲ್ಲಿ ಇರಲಿದೆ. ಹೀಗಾಗಿ ಉದ್ಯಮಿಗಳು ತಮಗೆ ಸಿಗಲಿರುವ ಪ್ರೋತ್ಸಾಹ ಧನ, ಭತ್ಯೆ, ವಿನಾಯಿತಿ ಹಾಗೂ ರಿಯಾಯಿತಿಗಳನ್ನು ವಿಝರ್ಡ್ ಮತ್ತು ಕ್ಯಾಲ್ಕ್ಯುಲೇಟರ್ ಮೂಲಕ ತಿಳಿದುಕೊಳ್ಳಬಹುದು ಎಂದು ಹೇಳಿದ್ದಾರೆ.

Tags: