Mysore
20
overcast clouds
Light
Dark

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ; ಮೊದಲು ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿ ರೀ ಟ್ವೀಟ್ ಮಾಡಿದ ಸಿಎಂ

ಬೆಂಗಳೂರು : ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರರಷ್ಟು ಉದ್ಯೋಗ ಮೀಸಲಾತಿ ಕಡ್ಡಾಯಗೊಳಿಸುವ ಮಸೂದೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಇದರ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು  ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತು ಪೋಸ್ಟ್‌ ಮಾಡಿದ್ದ ಟ್ವೀಟ್‌ ಅನ್ನು ಡಿಲೀಟ್‌ ಮಾಡಿ ಮತ್ತೆ ರೀ ಟ್ವೀಟ್ ಮಾಡಿದ್ದಾರೆ.

ಇತರ ರಾಜ್ಯಗಳಿಂದ ಉದ್ಯೋಗ ಅರಸಿ ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಖಾಸಗಿ ವಲಯಗಳಲ್ಲಿ ಕನ್ನಡೇತರರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಲಾಗುತ್ತಿದೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಖಾಸಗಿ ವಲಯದಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಶೇ ೧೦೦ ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎನ್ನುವ ಕೂಗು ಮೊದಲಿನಿಂದಲೂ ಕೂಡ ಕೇಳಿಬರುತ್ತಲೇ ಇದೆ.

ಇದರ ಬೆನ್ನಲ್ಲೆ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಎಲ್ಲಾ ಖಾಸಗಿ ಕೈಗಾರಿಕೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರ ನೇಮಕಾತಿಯನ್ನ ಕಡ್ಡಾಯಗೊಳಿಸುವ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ್ದು, ಇದನ್ನ ಸದನದಲ್ಲಿ ಮಂಡನೆ ಮಾಡುವುದು ಬಾಕಿ ಇತ್ತು. ಆದರೆ ಅಷ್ಟರಲ್ಲಿ ಉದ್ಯಮಿಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಪರ ವಿರೋಧಗಳ ಚರ್ಚೆ ಶುರುವಾಗಿದೆ. ಇದರ ಬೆನ್ನಲ್ಲೆ ಸಿದ್ದರಾಮಯ್ಯ ಅವರು ಕನ್ನಡಿಗರ ನೇಮಕಾತಿ ಬಗ್ಗೆ ಮಾಡಿದ್ದ ಟ್ವೀಟ್‌ ಅನ್ನು ಏಕಾಏಕಿ ಡಿಲೀಟ್‌ ಮಾಡಿ ಮತ್ತೆ ರೀ ಟ್ವೀಟ್‌ ಮಾಡಿದ್ದಾರೆ.

ಯಾವ ಕಾರಣಕ್ಕೆ ಸಿಎಂ  ಟ್ವೀಟ್‌ ಡಿಲೀಟ್‌ ಮಾಡಿದ್ರು

ಸಿಎಂ ಮಾಡಿದ್ದ ಟ್ವೀಟ್‌ ನಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳಿಗೆ ಶೇ ೧೦೦ ರಷ್ಟು ಎನ್ನುವುದು ಇತ್ತು. ಆದರೆ ನಿಯಮ ಬಿಲ್‌ ನಲ್ಲಿಆ ರೀತಿ ಇಲ್ಲ. ಮ್ಯಾನೇಜ್‌ ಮೆಂಟ್‌ ಕೋಟಾದಲ್ಲಿ ಶೇ ೫೦ ರಷ್ಟು, ನಾನ್‌ ಮ್ಯಾನೇಜ್‌ ಮೆಂಟ್‌ ಕೋಟಾ ಶೇ ೭೦ ರಷ್ಟು ಎಂಬ ನಿಯಮ ಬಿಲ್‌ ನಲ್ಲಿ ಇದೆ. ಹೀಗಾಗಿ ಸಿಎಂ ನೂರಕ್ಕೆ ನೂರಷ್ಟು ಎನ್ನುವ ಪದ ಬಳಕೆ ಮಾಡಿ ಟ್ವೀಟ್‌ ಮಾಡಿದ್ದಕ್ಕೆ ಅದನ್ನ ಡಿಲೀಟ್‌ ಮಾಡಿ ಬಳಿಕ ಸರಿಪಡಿಸಿ ರೀ ಟ್ವೀಟ್‌ ಮಾಡಿದ್ದಾರೆ.

ಮೊದಲು ಮಾಡಿದ್ದ ಟ್ವೀಟ್‌ ನಲ್ಲಿ ಏನಿತ್ತು..?

ರಾಜ್ಯದ ಎಲ್ಲಾ ಖಾಸಗಿ ಕೈಗಾರಿಕೆಗಳಲ್ಲಿ ಸಿ ಮತ್ತು ಡಿ ದರ್ಜೆಯ  ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರ ನೇಮಕಾತಿಯನ್ನು ಕಡ್ಡಾಯಗೊಳಿಸುವ ವಿಧೇಯಕಕ್ಕೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.

ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುವುದು ನಮ್ಮ ಸರ್ಕಾರದ ಆಶಯ. ನಮ್ಮದು ಕನ್ನಡಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ ಎಂದು ಟ್ವೀಟ್‌ ಮಾಡಿದ್ದರು.

ಮತ್ತೆ ಮಾಡಿರುವ ರೀ ಟ್ವೀಟ್‌ ನಲ್ಲಿ ಏನಿದೆ..?

ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಕಕ ಹುದ್ದೆಗಳಿಗೆ ಶೇ ೫೦ ರಷ್ಟು ಹಾಗೂ ಆಡಳಿತಾತ್ಕಕವಲ್ಲದ ಹುದ್ದೆಗಳಿಗೆ ಶೇ.೭೫ ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.

ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುವುದು ನಮ್ಮ ಸರ್ಕಾರದ ಆಶಯ. ನಮ್ಮದು ಕನ್ನಡಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ ಎಂದು ರೀ ಟ್ವೀಟ್‌ ಮಾಡಿದ್ದಾರೆ.