ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ಒಂದು ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.
ಈ ಸಂಬಂಧ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ” ನಾಡಿನ ನನ್ನ ಅಕ್ಕತಂಗಿಯರ, ತಾಯಂದಿರ ಕುಟುಂಬ ನಿರ್ವಹಣೆಯ ಹೊರೆಯನ್ನು ತಗ್ಗಿಸಿ, ಅವರಿಗೆ ನೆಮ್ಮದಿಯ ಬದುಕು ಕಟ್ಟಿಕೊಡಲು ರೂಪಿಸಿದ ಗೃಹಲಕ್ಷ್ಮಿ ಯೋಜನೆಯೀಗ ವರ್ಷ ಪೂರೈಸಿದೆ.
ಈ ಸಂದರ್ಭದಲ್ಲಿ ಯೋಜನೆಯ ಪೂರ್ಣ ಸದುಪಯೋಗ ಪಡೆದು ನವ ಉತ್ಸಾಹದಿಂದ ಹೊಸ ಬದುಕಿನತ್ತ ಹೆಜ್ಜೆಹಾಕುತ್ತಿರುವ ಫಲಾನುಭವಿ ಮಹಿಳೆಯರ ಯಶೋಗಾಥೆಯಿವು. ಬೆರಳೆಣಿಕೆಯಷ್ಟು ಮಾತ್ರ ಬೆಳೆಕಿಗೆ ಬಂದಿವೆ, ಸುದ್ದಿಯಾಗದ ಲಕ್ಷಾಂತರ ಕತೆಗಳಿವೆ. ಈ ಎಲ್ಲವೂ ಯೋಜನೆಯ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ” ಎಂದು ಬರೆದುಕೊಂಡಿದ್ದಾರೆ.
ಇದರ ಜೊತೆಗೆ ಕೆಲವು ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದು, ವಿದ್ಯಾಭ್ಯಾಸಕ್ಕೆ ನೆರವಾದ ಗೃಹಲಕ್ಷ್ಮಿ ಯೋಜನೆ, ಸೊಸೆಗೆ ಬದುಕು ಕಟ್ಟಿಕೊಡಲು ಅತ್ತೆಗೆ ಆಸರೆಯಾದ ಗೃಹಲಕ್ಷ್ಮಿ ಯೋಜನೆ, ಗೃಹಲಕ್ಷ್ಮಿ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿ ಸಂಭ್ರಮಿಸಿದ ಅಜ್ಜಿ, ಗೃಹಲಕ್ಷ್ಮಿ ಹಣದಿಂದ ಮೊಬೈಲ್ ಖರೀದಿಸಿ, ಸಿಎಂ ಫೋಟೋ ವಾಲ್‌ಪೇಪರ್‌ನಲ್ಲಿರಿಸಿ ಸಂಭ್ರಮಿಸಿದ ಮಹಿಳೆ ಹೀಗೆ ಹತ್ತು ಹಲವು ಕಥೆಗಳ ಪೋಸ್ಟ್‌ಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಸಿಎಂ ಸಿದ್ದರಾಮಯ್ಯ ಗೃಹಲಕ್ಷ್ಮಿ ವರ್ಷದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
2023ರ ಆಗಸ್ಟ್ 30ರಂದು ಮೈಸೂರಿನಲ್ಲಿ ಸಿಎಂ ಗೃಹಲಕ್ಷ್ಮಿ ಯೋಜನಗೆ ಚಾಲನೆ ನೀಡಿದ್ದರು. ಅದರಂತೆ ಮನೆ ಒಡತಿಯ ಖಾತೆಗೆ ಪ್ರತೀ ತಿಂಗಳು 2 ಸಾವಿರ ಹಣ ಹಾಕುವುದಾಗಿ ಸಿಎಂ ಹೇಳಿದ್ದರು.