ಬೆಂಗಳೂರು: ಕರ್ನಾಟಕ ಬಜೆಟ್ 2025-26ನೇ ಸಾಲಿನಲ್ಲಿ ರಾಜ್ಯದಲ್ಲಿ 50 ಹೊಸ ಪಶು ಚಿಕಿತ್ಸಾಲಯಗಳನ್ನು ಆರಂಭಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು(ಮಾರ್ಚ್.7) ಬಜೆಟ್ ಮಂಡಿನೆ ಮಾಡಿದ ಅವರು, ಪಶುಸಂಗೋಪನೆ ಕ್ಷೇತ್ರದ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಈ ನಿಟ್ಟಿನಲ್ಲಿ ಅನುಗ್ರಹ ಯೋಜನೆಯ ಪರಿಹಾರ ಮೊತ್ತ ಏರಿಕೆ ಮಾಡಲಾಗಿದೆ. ಅಂತೆಯೇ ಮುಖ್ಯವಾಗಿ ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟ ನಿವಾರಣೆಗೆ ಅನುಗ್ರಹ ಯೋಜನೆ ತರಲಾಗುವುದು ಎಂದರು.
ಈ ಯೋಜನೆಯ ಮೂಲಕ ಹಸು, ಎಮ್ಮೆ ಹಾಗೂ ಎತ್ತುಗಳಿಗೆ ಪ್ರಸ್ತುತ ನೀಡಲಾಗುತ್ತಿರುವ ಪರಿಹಾದ ಮೊತ್ತವನ್ನು 10,000 ರಿಂದ 15,000 ರೂ.ಗಳಿಗೆ ಕುರಿ ಮತ್ತು ಮೇಕೆಗಳಿಗೆ ನೀಡುತ್ತಿರುವ ಮೊತ್ತವನ್ನು 5,000 ದಿಂದ 7,500 ರೂ.ಗಳಿಗೆ ಹಾಗೂ 3-4 ತಿಂಗಳ ಕುರಿ, ಮೇಕೆ ಮರಿಗಳಿಗೆ ನೀಡಲಾಗುತ್ತಿರುವ ಮೊತ್ತವನ್ನು 3,500 ರೂ.ನಿಂದ 5,000 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಹೇಳಿದರು.
50 ಹೊಸ ಪಶು ಚಿಕಿತ್ಸಾಲಯ ಆರಂಭ
ಕಳೆದ ಎರಡು ವರ್ಷಗಳಲ್ಲಿ 60 ನೂತನ ಪಶು ಚಿಕಿತ್ಸಾಲಯಗಳ ಕಾರ್ಯಾರಂಭಗೊಳಿಸಲಾಗಿದೆ. ಆದರೆ ಇದೀಗ ಈ ಬಾರಿಯ ಬಜೆಟ್‌ನಲ್ಲಿ 50 ಹೊಸ ಪಶು ಚಿಕಿತ್ಸಾಲಯಗಳನ್ನು ಆರಂಭಿಸಲಾಗುವುದು. ಅಲ್ಲದೇ ನಬಾರ್ಡ್ ಸಹಯೋಗದೊಂದಿಗೆ 2025-26ನೇ ಸಾಲಿನಲ್ಲಿ 100 ಪಶು ವೈದ್ಯಕೀಯ ಸಂಸ್ಥೆಗಳ ಹೊಸ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ವಲಸೆ ಕುರಿಗಾರರಿಗೆ ತರಬೇತಿ
ಆಧುನಿಕ ಕುರಿ ಸಾಕಾಣಿಕೆ ಪದ್ಧತಿಗಳು ಹಾಗೂ ನೈಸರ್ಗಿಕ ವಿಕೋಪಗಳ ವೇಳೆ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕುರಿಗಾರರಿಗೆ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯಗಳ ಸಹಯೋಗದಲ್ಲಿ ತರಬೇತಿ ನೀಡಲಾಗುವುದು. ಜೊತೆಗೆ ನಮ್ಮ ಸರ್ಕಾರವು ಅಸ್ತಿತ್ವಕ್ಕೆ ಬಂದ ಬಳಿಕ ನಂದಿನಿ ಬ್ರ್ಯಾಂಡ್‌ನ ಮಾರುಕಟ್ಟೆಯನ್ನು ವಿಸ್ತರಿಸಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿದೆ. ಹೀಗಾಗಿ 2024-25ನೇ ಸಾಲಿನಲ್ಲಿ ಒಂದು ಕೋಟಿಗೂ ಹೆಚ್ಚು ಲೀಟರ್ ಹಾಲನ್ನು ಶೇಖರಿಸಲಾಗಿದೆ ಎಂದರು.
ಮೇವಿನ ಮರಗಳ ನೆಡುತೋಪು ಅಭಿವೃದ್ಧಿ
ಅರಣ್ಯ ಇಲಾಖೆ ಹಾಗೂ ನರೇಗಾ ಸಹಯೋಗದೊಂದಿಗೆ ಅಮೃತ್‌ಮಹಲ್ ಕಾವಲುಗಳಲ್ಲಿನ ಭೂ ಒತ್ತುವರಿ ಪಡೆಯಲು ಮತ್ತು ಅಮೃತ್ ಮಹಲ್ ರಾಸುಗಳಿಗೆ ಮೇವು ಲಭ್ಯವಾಗುವಂತೆ ಮಾಡಲು ಮೇವಿನ ಮರಗಳ ನೆಡುತೋಪು ಅಭಿವೃದ್ಧಿಗೊಳಿಸಲಾಗುವುದು. ಅಲ್ಲದೇ ರಾಜ್ಯದ ಹೆಮ್ಮೆಯ ದೇಶಿ ದನಗಳಾದ ಹಳ್ಳಿಕಾರ್, ಕಿಲಾರಿ, ಅಮೃತ್ ಮಹಲ್ ಮತ್ತು ಬಂಡೂರು ಕುರಿ ತಳಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ 2 ಕೋಟಿ ನೀಡಲಾಗುವುದು ಎಂದು ತಿಳಿಸಿದರು.





