ಬೆಂಗಳೂರು: ಸರ್ಕಾರದಲ್ಲಿನ ಹಣಕಾಸಿನ ಪರಿಸ್ಥಿತಿಯನ್ನು ಅವಲೋಕಿಸಿ, ಗುತ್ತಿಗೆದಾರರ ಬಾಕಿ ಬಿಲ್ಲುಗಳ ಪಾವತಿ ಬಗ್ಗೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಕಿಯಿರುವ ಮೊತ್ತಗಳ ಪಾವತಿಗೆ ಮನವಿಕೊಂಡಿದ್ದು, ಏಪ್ರಿಲ್ ಮಾಹೆಯಲ್ಲಿ ಸಾಧ್ಯವಾದಷ್ಟು ಬಾಕಿ ಬಿಲ್ಲುಗಳನ್ನು ಪಾವತಿಸಲು ಪ್ರಯತ್ನಿಸಲಾಗುವುದು. ಹಿಂದಿನ ಸರ್ಕಾರದ ಅವಧಿಯಲ್ಲಿ ಅನುದಾನವಿಲ್ಲದಿದ್ದರೂ, ಟೆಂಡರ್ ಪ್ರಕ್ರಿಯೆ ಕೈಗೊಂಡು ಕಾಮಗಾರಿ ಪ್ರಾರಂಭಿಸಿದ ಕಾರಣದಿಂದಾಗಿ ಬಾಕಿ ಬಿಲ್ಲುಗಳು ಹೆಚ್ಚಿವೆ. ಇದಕ್ಕೆ ನಮ್ಮ ಸರ್ಕಾರ ಹೊಣೆಯಾಗಲು ಸಾಧ್ಯವೇ ಎಂದು ಮರುಪ್ರಶ್ನಿಸಿದರು.
ಅಧಿಕಾರಿಗಳ ಮಟ್ಟದಲ್ಲಿ ಕಮೀಷನ್ ದಂಧೆ ನಡೆದಿರುವುದಾಗಿ ಗುತ್ತಿಗೆ ಸಂಘದವರು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಲಂಚ ಪಡೆಯುವುದು ಹಾಗೂ ಲಂಚ ನೀಡುವುದು ಸಹ ಅಪರಾಧ. ಈ ರೀತಿಯ ಕೃತ್ಯದಲ್ಲಿ ಯಾರು ತೊಡಗಬಾರದು. ತಾನು ಇದುವರೆವಿಗೂ ಹಣ ಬಿಡುಗಡೆ ಮಾಡಲು ಯಾರಿಂದಲೂ ದುಡ್ಡು ಪಡೆದಿಲ್ಲವೆಂದರು.
ಮಾರ್ಚ್ 7 ರಂದು ರಾಜ್ಯ ಬಜೆಟ್ ಮಂಡನೆ
ಮಾರ್ಚ್ 7 ರಂದು ರಾಜ್ಯ ಬಜೆಟ್ ಮಂಡಿಸಲಾಗುವುದು. ಮಾರ್ಚ್ 19ರವರೆಗೆ ಬಜೆಟ್ ಮೇಲಿನ ಚರ್ಚೆಗಳು ನಡೆಯಲಿದ್ದು, ಮಾರ್ಚ್ 19 ರಂದು ವಿಧಾನಸಭೆಯಲ್ಲಿ ಹಾಗೂ 20 ರಂದು ವಿಧಾನಪರಿಷತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವುದಾಗಿ ತಿಳಿಸಿದರು.