ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ನಮ್ಮ ಪಕ್ಷದವರು ಭೇಟಿಯಾದ ತಕ್ಷಣ ಸಿಎಂ ಹುದ್ದೆಗಾಗಿ ಭೇಟಿಯಾಗಿದ್ದಾರೆಂದು ಹೇಳುವುದು ತಪ್ಪು. ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದವರು ಮುಡಾ ಪ್ರಕರಣಕ್ಕಿಂತಲೂ ಮುಂಚೆ ದೆಹಲಿಗೆ ಹೋಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಇನ್ನುಳಿದ ನಾಯಕರನ್ನು ಸಹ ಭೇಟಿಯಾಗಿದ್ದರು. ಅವರು ಭೇಟಿಯಾದ ತಕ್ಷಣ ಸಿಎಂ ಹುದ್ದೆಗಾಗಿಯೇ ಭೇಟಿ ನೀಡಿದ್ದಾರೆ ಎಂಬಂತೆ ಯಾಕೆ ಹೋಲಿಕೆ ಬಿಂಬಿಸಲಾಗುತ್ತಿದೆಯೋ ತಿಳಿಯದು ಎಂದರು.
ಕಾಂಗ್ರೆಸ್‌ನ ರಾಜ್ಯ ಮುಖಂಡರೆಲ್ಲರೂ ದೆಹಲಿಯಲ್ಲಿರುವ ಮುಖಂಡರೊಡನೆ ಭೇಟಿಯಾಗಿ ಮಾತನಾಡುವುದು ಸರ್ವೇ ಸಾಮಾನ್ಯ. ಆದರೆ, ಮುಡಾ ಪ್ರಕರಣ ಬರುತ್ತಿದ್ದಂತೆ ಹೀಗೆಂದುಕೊಳ್ಳುವುದು ತಪ್ಪು. ಮುಖ್ಯಮಂತ್ರಿ ಸ್ಥಾನದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿರಲಿದೆ. ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿದ್ದಾರೆ. ಅವರೇ ಮುಂದಿನ ದಿನಗಳಲ್ಲಿಯೂ ಕೂಡ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.