ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗೋದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಇಂದು (ಫೆ.22) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಬಸ್ ನಿರ್ವಾಹಕನ ಮೇಲೆ ಹಲ್ಲೆ, ಕೋರಮಂಗಲದಲ್ಲಿ ಸಾಮೂಹಿಕ ಹತ್ಯಾಚಾರ ಸೇರಿದಂತೆ ಹಲವಾರು ಅಹಿತಕರ ಘಟನೆಗಳು ನಡೆಯುತ್ತಿವೆ ಆದರೂ ರಾಜ್ಯ ಸರ್ಕಾರ ಸುಮ್ಮನಿದೆ ಎಂದು ವಾಗ್ದಾಳಿ ನಡೆಸಿದರು.
ದಲಿತರ ಉದ್ಧಾರಕ್ಕಾಗಿ ಮೀಸಲಿದ್ದ ಎಸ್‌ಸಿಪಿ ಟಿಎಸ್‌ಪಿ ಹಣವನ್ನು ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ. ದಲಿತರ ಹಣವನ್ನು ಸರ್ವರಿಗೂ ಗ್ಯಾರಂಟಿ ಮೂಲಕ ಹಂಚುತ್ತಿದ್ದಾರೆ. ದಲಿತರಿಗೆ ಮೋಸ ಆದರೆ ನ್ಯಾಯಾಲಯದ ಮೆಟ್ಟಿಲು ಹತ್ತುತ್ತೇವೆ. ಈ ಬಗ್ಗೆ ರಾಜ್ಯಾದ್ಯಾಂತ 14 ತಂಡಗಳು ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.





