ಬೆಂಗಳೂರು: ಸಿಎಂ ಬದಲಾವಣೆ ಕಾಂಗ್ರೆಸ್‌ನ ಆಂತರಿಕ ವಿಚಾರಕ್ಕೆ ಅದಕ್ಕೆ ನಾನು ತಲೆಹಾಕಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಕುರಿತಂತೆ ಸ್ವಾಮೀಜಿಗಳು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿದು ಆ ಸ್ಥಾನವನ್ನು ಡಿಕೆಶಿಗೆ ನೀಡಲಿ ಎಂಬ ಆಗ್ರಹಗಳು ಆಗಾಗ್ಗೆ ಕೇಳಿ ಬರುತ್ತಲೇ ಇವರ. ಹೀಗಿರುವಾಗಲೇ ಒಕ್ಕಲಿಗ ಸ್ವಾಮೀಜಿಯೊಬ್ಬರು ಡಿ.ಕೆ.ಶಿವಕುಮಾರ್ ಅವರು ಸಿಎಂ ಸ್ಥಾನದಲ್ಲಿ ಕೂರಬೇಕು ಎಂದು ಆಗ್ರಹಿಸಿದ್ದಾರೆ.
ಸ್ವಾಮೀಜಿ ಹೇಳಿಕೆ ಬೆನ್ನಲ್ಲೇ ರಾಜ್ಯ ಸರ್ಕಾರದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದ್ದು, ಡಿಕೆಶಿ ಅಭಿಮಾನಿಗಳೆಲ್ಲಾ ಈ ಆಗ್ರಹಕ್ಕೆ ಧ್ವನಿಗೂಡಿಸಿದ್ದಾರೆ.
ಈ ಬೆಳವಣಿಗೆ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು, ದೊಡ್ಡವರ ವಿಷಯ ನನಗೆ ಗೊತ್ತಿಲ್ಲ. ಕಳೆದ ಒಂದು ತಿಂಗಳಿಂದ ಎಚ್‌ಡಿಡಿ ವಿರುದ್ಧ ಏನೇನೋ ನಡೆಯಿತು. ಆದ್ರೂ ಯಾರೊಬ್ಬರೂ ಕೂಡ ನಮ್ಮ ವಿರುದ್ಧದ ಷಡ್ಯಂತ್ರದ ಬಗ್ಗೆ ಮಾತನಾಡಲಿಲ್ಲ. ಯಾರನ್ನಾದ್ರೂ ಸಿಎಂ ಮಾಡಲಿ ಆ ವಿಷಯ ನಮಗೆ ಬೇಕಿಲ್ಲ. ಸಿಎಂ ಬದಲಾವಣೆ ಕಾಂಗ್ರೆಸ್‌ನ ಆಂತರಿಕ ವಿಚಾರ. ಸಿಎಂ ಹುದ್ದೆ ನಮ್ಮ ಹತ್ತಿರ ಇಲ್ಲ. ಅದಕ್ಕೆ ನಾವು ಆ ಬಗ್ಗೆ ಹೆಚ್ಚಿಗೆ ಮಾತನಾಡಲು ಹೋಗಲ್ಲ ಎಂದರು.
ಇಬ್ಬರು ಮಕ್ಕಳು ಜೈಲಿನಲ್ಲಿರುವ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ದೇವರಿದ್ದಾನೆ ಎಲ್ಲವನ್ನೂ ಅವನೇ ನೋಡಿಕೊಳ್ತಾನೆ. ಅವನ ಮೇಲೆಯೇ ನಾವು ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿ ತೆರಳಿದರು.