Mysore
19
few clouds
Light
Dark

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ದಾರಿ ತಪ್ಪಿದ ಮಗನಂತೆ ಆಗಿದೆ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಧಾರವಾಡ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಿಂದ ಅರಾಜಕತೆ ಸೃಷ್ಟಿಯಾಗಿದೆ. ಒಬ್ಬರ ವಿರುದ್ಧ ಮತ್ತೊಬ್ಬರು ಹೇಳಿಕೆ ಕೊಡಿಸುತ್ತಿದ್ದಾರೆ. ಹೆಚ್ಚು ಡಿಸಿಎಂ ಸೃಷ್ಟಿ ಅಂತಾ ಒತ್ತಾಯ ಎಬ್ಬಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಈ ಎಲ್ಲಾ ಹೇಳಿಕೆಗಳನ್ನು ತಮ್ಮ ಬಾಲಂಗೋಚಿಗಳಿಂದ ಹೇಳಿಸ್ತಾ ಇದ್ದಾರೆ. ಇತ್ತ ಸಿಎಂ ಅನ್ನೇ ಬದಲಾವಣೆ ಮಾಡಬೇಕು ಎಂದು ತಮ್ಮ ಹಿಂಬಾಲಕರಿಂದ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿಸುತ್ತಿದ್ದಾರೆ. ರಾಜ್ಯ ಸರ್ಕಾರ ದಿಕ್ಕು-ದಾರಿ ತಪ್ಪಿದೆ. ದಾರಿ ತಪ್ಪಿದ ಮಗನಂತೆ ಸರ್ಕಾರ ಆಗಿದೆ. ಒಬ್ಬೊಬ್ಬರಿಗೊಬ್ಬರು ತಮ್ಮ ಹಿಂಬಾಲಕರನ್ನು ಬಿಡುತ್ತಿದ್ದಾರೆ ಎಂದು ಕಿಡಿಕಾರಿದರು.

ತಮ್ಮದೇ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಹೇಳಿಕೆಗಳನ್ನು ಕೊಡಿಸುತ್ತಾ ಇದ್ದಾರೆ. ಪಕ್ಷದ ಹೈಕಮಾಂಡ್‌ ಕ್ರಮ ಅಂತಾ ಹೇಳ್ತಾರೆ. ಏನೇ ಹೇಳಿದರೂ ಕ್ರಮ ಆಗುತ್ತಿಲ್ಲ. ಇಷ್ಟು ದಯನೀಯ ಸ್ಥಿತಿಗೆ ಕಾಂಗ್ರೆಸ್‌ ಸರ್ಕಾರ ಬಂದಿದೆ. ಒಂದು ವರ್ಷದಲ್ಲಿ ಕಾಂಗ್ರೆಸ್‌ ಸರ್ಕಾರ ಹೀಗಾಗಿದೆ. ಕಾಂಗ್ರೆಸ್‌ ಬಗ್ಗೆ ಜನ ಬೇಸತ್ತಿದ್ದಾರೆ. ಇದರ ಪರಿಣಾಮ ರಾಜ್ಯದ ಆಡಳಿತದ ಮೇಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇನ್ನೂ ಮುಂದುವರಿದು ಮಾತನಾಡಿದ ಅವರು, ಐದು ವರ್ಷ ಚೆನ್ನಾಗಿ ಆಡಳಿತ ನಡೆಸಿ ಅಂತಾನೇ ನಾವು ಹೇಳೋದು. ಅವರ ಆಂತರಿಕ ಕಾರಣದಿಂದ ಸರ್ಕಾರ ಬಿದ್ದರೆ ನಾವು ಜವಾಬ್ದಾರರಲ್ಲ. ಆಮೇಲೆ ಅದಕ್ಕೆ ಆಪರೇಷನ್‌ ಕಮಲ ಅಂತಾ ಅವರೇ ಹೇಳ್ತಾರೆ. ಆದರೆ ಆ ವಿಚಾರ ನಮ್ಮ ತಲೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.