ಬೆಂಗಳೂರು: ರಾಜ್ಯದ 9 ವಿಶ್ವವಿದ್ಯಾನಿಲಯಗಳನ್ನು ಮುಚ್ಚುವ ಸರ್ಕಾರದ ನಿರ್ಧಾರ ಅಷ್ಟು ಸುಲಭವಲ್ಲ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಸಂಯೋಜಿತ ಕಾಲೇಜುಗಳನ್ನು ಮುಚ್ಚುವುದೇ ದೊಡ್ಡ ಪ್ರಕ್ರಿಯೆಯಾಗಿದ್ದು, ಸರ್ಕಾರ ಅಂದುಕೊಂಡಂತೆ ಸ್ಥಾಪಿಸಿರುವ ವಿಶ್ವವಿದ್ಯಾನಿಲಯಗಳನ್ನು ಮುಚ್ಚುವುದು ಅಷ್ಟು ಸುಲಭವಲ್ಲ ಎಂದರು.
ಇನ್ನು ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ಜಿಲ್ಲೆಯಲ್ಲಿ ವಿವಿಗಳನ್ನು ಸ್ಥಾಪಿಸುವುದಾಗಿ ಹೇಳಿದರು. ಉನ್ನತ ಶಿಕ್ಷಣವನ್ನು ಉದಾರೀಕರಣಗೊಳಿಸಬೇಕು ಹಾಗೂ ಪ್ರತಿ ಅರ್ಹ ಜಿಲ್ಲೆಗಳು ವಿಶ್ವವಿದ್ಯಾಲಯ ಪಡೆಯಬೇಕು ಎಂದರು.
ವಿವಿಗಳನ್ನು ಮುಚ್ಚುವ ಕುರಿತು ತಜ್ಞರ ಸಮಿತಿಯ ವರದಿಯನ್ನು ಬಹಿರಂಗಗೊಳಿಸಲಿ ಎಂದು ಸವಾಲು ಹಾಕಿದರು.
ನನ್ನ ಜ್ಞಾನದ ಪ್ರಕಾರ ಹೊಸ ವಿಶ್ವವಿದ್ಯಾಲಯಗಳು ಹಳೆಯ ವಿದ್ಯಾಲಯಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಈ ವಿಷಯದ ಬಗ್ಗೆ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರೊಂದಿಗೆ ಬಹಿರಂಗ ಚರ್ಚೆ ಮಾಡಲು ಸಿದ್ಧ ಎಂದು ಸವಾಲು ಹಾಕಿದರು.





