ಬೆಂಗಳೂರು: ಮೈಸೂರು ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸಿಕ್ಕಿರುವುದು ನಮಗಿಂತ ಹೆಚ್ಚು ಕಾಂಗ್ರೆಸ್‌ನವರಿಗೆ ನೋವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸೈಟ್ ವಾಪಸ್ ಕೊಟ್ಟಿರುವುದು ನಮ್ಮ ಹೋರಾಟದಿಂದ. ಆದರೂ ಲೋಕಾಯುಕ್ತ ಕ್ಲೀನ್‌ಚಿಟ್ ನೀಡಿರುವುದಕ್ಕೆ ನಮಗೆ ಬೇಸರ ಇದೆ. ನಮಗಿಂತಲೂ ಹೆಚ್ಚು ಕಾಂಗ್ರೆಸ್‌ನ ಕೆಲವು ನಾಯಕರಿಗೆ ಬೇಸರ ತರಿಸಿದೆ ಎಂದು ವ್ಯಂಗ್ಯವಾಡಿದರು.
ಇನ್ನು ಬಿಜೆಪಿ ಮತ್ತು ಜೆಡಿಎಸ್ ಮುಡಾ ವಿಚಾರದಲ್ಲಿ ಅಧಿವೇಶನದಲ್ಲಿ ಚರ್ಚೆ ಮಾಡಿದ್ದೇವೆ. ಪಾದಯಾತ್ರೆ ಸಹ ನಡೆಸಿದ್ದೇವೆ. ದೇಶದ ದೊಡ್ಡ ವಕೀಲರು ಬಂದು ವಾದ ಮಾಡಿ ಹೋಗಿರುವ ಕೇಸ್ ಇದು. ಮುಡಾದಲ್ಲಿ ಸಿದ್ದರಾಮಯ್ಯ ತಪ್ಪು ಮಾಡಿಲ್ಲ ಅಂದಮೇಲೆ 14 ಸೈಟು ಯಾಕೆ ವಾಪಸ್ ಕೊಟ್ರು? ಎಂದು ಪ್ರಶ್ನೆ ಮಾಡಿದರು. ನಾಳೆ ಪೊಲೀಸರು ಕ್ಲೀನ್‌ಚಿಟ್ ಕೊಡುತ್ತಾರೆ. ಮುಡಾ ಲೇಔಟ್ ಮಾಡಿರೋದು ಸಿದ್ದರಾಮಯ್ಯ ಕುಟುಂಬಕ್ಕೆ ಗೊತ್ತೇ ಇಲ್ಲ. ಆಕರೆ ನೋಡೇ ಇಲ್ಲ ಅವ್ರು. ಸಿಎಂ ಕುಟುಂಬದ ಸದಸ್ಯರು ಅಮಾಯಕರು, ಮುಗ್ಧರು, ಮುಡಾ ಕಡೆ ತಲೆ ಹಾಕಿಯೂ ಮಲಗಿಲ್ಲ ಎಂದು ವ್ಯಂಗ್ಯವಾಡಿದರು.
ಇನ್ನು ಮುಡಾ ಹೋರಾಟಕ್ಕೆ ಗೆಲುವಾಗಿದೆ. ನಮಗೆ ಹಿನ್ನಡೆ ಆಗಿಲ್ಲ. ನಮ್ಮ ಹೋರಾಟದ ಫಲವಾಗಿಯೇ ಇಡಿ ಮುಡಾ ಆಸ್ತಿ ಸೀಜ್ ಮಾಡಿದ್ದು, ಆದ್ರೆ ಲೋಕಾಯುಕ್ತ ಪೊಲೀಸರು ಪ್ರಭಾವಕ್ಕೊಳಗಾಗಿ ಕ್ಲೀನ್‌ಚಿಟ್ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.





