Mysore
28
few clouds

Social Media

ಶನಿವಾರ, 24 ಜನವರಿ 2026
Light
Dark

ಬಾಲ್ಯ ವಿವಾಹ: ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ವಿಷಾದ

ಮಂಗಳೂರು: ರಾಜ್ಯವು ಬಾಲ್ಯ ವಿವಾಹ ಪ್ರಕರಣದಲ್ಲಿ ದೇಶದಲ್ಲಿ ಎರಡನೇ ಸ್ಥಾನ ಹೊಂದಿರುವುದು ದುರದೃಷ್ಟಕರ ಸಂಗತಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಳ್ಕರ್‌ ವಿಷಾದ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಶನಿವಾರ(ಜು.13) ಮಾತನಾಡಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿಯಾಗಿ, ನನಗೂ ತಲೆ ತಗ್ಗಿಸುವ ವಿಚಾರವಿದು. ಬಾಲ್ಯ ವಿವಾಹದಲ್ಲಿ ಬಳ್ಳಾರಿ ಜಿಲ್ಲೆಯು ರಾಜ್ಯಕ್ಕೆ ಪ್ರಥಮ ಹಾಗೂ ಬೆಳಗಾವಿ ಎರಡನೇ ಸ್ಥಾನದಲ್ಲಿದೆ ಎಂದು ಹೇಳಲೂ ನನಗೆ ನಾಚಿಕೆ ಆಗುತ್ತದೆ ಎಂದು ಹೇಳಿದರು.

ಇದಕ್ಕೆ ನಮ್ಮ ಇಲಾಖೆಯಲ್ಲಿನ ದೋಷಗಳ ಮಾತ್ರ ಕಾರಣವಲ್ಲ. ಸ್ಥಳೀಯ ಮಟ್ಟದ ಗ್ರಾಮ ಪಂಚಾಯ್ತಿ, ಪ್ರಾಥಾಮಿಕ ಶಾಲೆಯ ಎಸ್‌ಡಿಎಂಸಿಗಳು, ಕಾನೂನು, ಆರೋಗ್ಯ ಹಾಗೂ ಪೊಲೀಸ್‌ ಇಲಾಖೆಗಳು ಸಹಕಾರ ನೀಡಬೇಕು. ಎಲ್ಲರೂ ಒಗ್ಗಟ್ಟಿನಲ್ಲಿ ಕೆಲಸ ನಿರ್ವಹಿಸಿದರೆ ಮಾತ್ರ ಬಾಲ್ಯವಿವಾಹವನ್ನು ಬೇರು ಮಟ್ಟದಿಂದ ಕಿತ್ತುಹಾಕಲು ಸಾಧ್ಯ ಎಂದು ಅವರು ಹೇಳಿದರು.

ಬಾಲ್ಯವಿವಾಹವನ್ನು ಮೂಢನಂಬಿಕೆಯಿಂದ ಮಾಡುತ್ತಾರೋ, ಏನೋ ಎಂದೇ ಗೊತ್ತಾಗುತ್ತಿಲ್ಲ. ಇದನ್ನು ತಡೆಯಲು ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಸಮಿತಿ ಇದೆ. ಅದರಲ್ಲಿ ವಕೀಲರು, ಸಂಘ ಸಂಸ್ಥೆಗಳ ಮುಖ್ಯಸ್ಥರು ಇದ್ದಾರೆ. ಬಾಲ್ಯವಿವಾಹದ ಬಗ್ಗೆ ನಮಗೆ ತಿಳಿದರೆ ತಕ್ಷಣ ಎಫ್‌ಐಆರ್‌ ದಾಖಲಿಸುತ್ತೇವೆ. ಕಟ್ಟುನಿಟ್ಟಿನ ಕ್ರಮ ಕೂಡ ಆಗುತ್ತಿದೆ ಎಂದರು.

ಇಷ್ಟೆಲ್ಲಾ ಕ್ರಮಗಳ ಹೊರತಾಗಿಯೂ ಬಾಲ್ಯ ವಿವಾಹ ನಡೆದು, ಬಾಲಾವಸ್ಥೆಯಲ್ಲೇ ಹೆಣ್ಣು ಮಕ್ಕಳು ಗರ್ಭಿಣಿ ಆಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೇರುಮಟ್ಟದಿಂದ ಇದನ್ನು ಕಿತ್ತುಹಾಕಲು ಪ್ರಯತ್ನಿಸಲಾಗುವುದು. ಈ ಬಗ್ಗೆ ಎಲ್ಲಾ ಅಧಿಕಾರಿಗಳಿಗೂ ನಿರ್ದೇಶನ ನೀಡಲಾಗಿದೆ ಎಂದು ಸಚಿವೆ ತಿಳಿಸಿದರು.

Tags:
error: Content is protected !!