ಮೈಸೂರು : ಚಲನಚಿತ್ರಗಳು, ಧಾರಾವಾಹಿಗಳು, ಟಿವಿ ಕಾರ್ಯಕ್ರಮಗಳು, ಜಾಹೀರಾತುಗಳು ಹಾಗೂ ಇತರ ವಾಣಿಜ್ಯ ಶ್ರವಣ-ದೃಶ್ಯ ಮಾಧ್ಯಮಗಳಲ್ಲಿ ಮಕ್ಕಳು (ಬಾಲ ಕಲಾವಿದರು) ಪಾಲ್ಗೊಳ್ಳಬೇಕಾದರೆ, ನಿರ್ಮಾಪಕರು ಅಥವಾ ಆಯೋಜಕರು ಜಿಲ್ಲಾಧಿಕಾರಿಯಿಂದ ಅನುಮತಿ ಕಡ್ಡಾಯ ಎಂದು ಕಾರ್ಮಿಕ ಇಲಾಖೆಯು ಸ್ಪಷ್ಟವಾಗಿ ಎಚ್ಚರಿಸಿದೆ.
ಈ ನಿಯಮವು ಬಾಲ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯ ಅಡಿಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಜಾರಿಗೊಳಿಸಲಾಗಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೆಚ್ಚಿನ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ನಿಷೇಧಿಸಲಾಗಿದ್ದರೂ, ಮನರಂಜನಾ ಕ್ಷೇತ್ರದಲ್ಲಿ ಬಾಲ ಕಲಾವಿದರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಇದು ಮಕ್ಕಳ ಶಿಕ್ಷಣಕ್ಕೆ (ಶಿಕ್ಷಣದ ಹಕ್ಕು) ಯಾವುದೇ ತೊಂದರೆಯಾಗದಂತೆಯೂ, ಯಾವುದೇ ರೀತಿಯ ಶೋಷಣೆ ಅಥವಾ ಹಾನಿಯಾಗದಂತೆಯೂ ಇರಬೇಕು.
ಜಿಲ್ಲಾಧಿಕಾರಿಯ ಅನುಮತಿ ಇಲ್ಲದೇ ಮಕ್ಕಳನ್ನು ಬಳಸಿಕೊಂಡರೆ ಅದು ಗಂಭೀರ ಕಾನೂನು ಉಲ್ಲಂಘನೆಯಾಗುತ್ತದೆ. ಪೂರ್ವಾನುಮತಿಗಾಗಿ ನಮೂನೆ ‘ಸಿ’ಯಲ್ಲಿ ಮುಚ್ಚಳಿಕೆ ಪತ್ರ ಸಲ್ಲಿಸಬೇಕು. ಪಾಲ್ಗೊಳ್ಳುವ ಮಕ್ಕಳ ಪೂರ್ಣ ಪಟ್ಟಿ ನೀಡಬೇಕು. ಜೊತೆಗೆ ಪೋಷಕರು ಅಥವಾ ಕಾನೂನು ಪಾಲಕರ ಲಿಖಿತ ಒಪ್ಪಿಗೆ ಪತ್ರ ಸಲ್ಲಿಸಬೇಕು. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಇಂತಹ ಕ್ರಮ ಕೈಗೊಳ್ಳಲಾಗಿದೆ. ಇಲ್ಲವಾದಲ್ಲಿ ಸಂಬಂಧಪಟ್ಟ ಸಿನಿಮಾ, ಧಾರಾವಾಹಿ ಅಥವಾ ಕಾರ್ಯಕ್ರಮದ ನಿರ್ಮಾಪಕರು ಮತ್ತು ಆಯೋಜಕರು ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಇಲಾಖೆಯ ಆಯುಕ್ತರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದ್ದು, ಮಕ್ಕಳನ್ನು ಒಳಗೊಂಡ ಯಾವುದೇ ನಿರ್ಮಾಣ ಅಥವಾ ಕಾರ್ಯಕ್ರಮದಲ್ಲಿ ತೊಡಗಿರುವವರು ತಕ್ಷಣ ಮೈಸೂರು ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ಅನುಮತಿ ಪಡೆಯಬೇಕು ಎಂದು ಇಲಾಖೆ ಸೂಚಿಸಿದೆ.





