ಮೈಸೂರು: ದಾವಣಗೆರೆಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿನ ಯುವಕನ ಸಾವು ಲಾಕಪ್ ಡೆತ್ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಇಂದು(ಮೇ.೨೫) ಮೈಸೂರಿನಲ್ಲಿ ಮಾತನಾಡಿದ ಅವರು, ಮೃತ ಯುವಕ ಆದಿಲ್‌ಗೆ ಮೂರ್ಛೆ ರೋಗ ಇತ್ತು. ಆದ್ದರಿಂದ ಆತ ಮೃತಪಟ್ಟಿದ್ದಾನೆ ಎಂದರು.
ಎಫ್‌ಐಆರ್ ಇಲ್ಲದೇ ಪೊಲೀಸರು ವಿಚಾರಣೆಗೆ ಠಾಣೆಗೆ ಕರೆ ತಂದಿದ್ದು ತಪ್ಪು. ಈ ತಪ್ಪಿಗಾಗಿ ಪೋಲಿಸ್ ಅಧಿಕಾರಿಗಳ ಅಮಾನತಿಗೆ ಸೂಚಿಸಿದ್ದೇನೆ. ಆತನಿಗೆ ಪಿಟ್ಸ್ ಬಂದಿತ್ತು, ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೂ ಕೂಡ ಪ್ರಕರಣದ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಏನಿದು ಪ್ರಕರಣ;
ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಟಿಪ್ಪು ನಗರದ ನಿವಾಸಿ ಆದೀಲ್(೩೦)ನನ್ನು ಮಟ್ಕಾ ಪ್ರಕರಣದಲ್ಲಿ ಠಾಣೆಗೆ ವಿಚಾರಣೆಗೆ ಕರೆತಂದಿದ್ದರು. ಠಾಣೆಗೆ ಕರೆತರುತ್ತಿದ್ದಂತೆ, ಆದಿಲ್ ಬಿಪಿ ಲೋ ಆಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಾಗಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಇದರಿಂದ ಆಕ್ರೋಶಗೊಂದ ಮೃತನ ಕುಟುಂಬಸ್ಥರು ಪೊಲೀಸ್ ಠಾಣೆಗೆ ದಾಳಿ ಮಾಡಿ, ಪೊಲೀಸರೆ ಸಾಯಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಈ ಪ್ರಕರಣದಿಂದ ಕಲ್ಲು ತೂರಾಟ ನಡೆಸಿದ್ದು, ೧೧ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ೧೦ ಕ್ಕೂ ಹೆಚ್ಚು ಪೊಲೀಸ್ ವ್ಯಾನ್‌ಗಳು ಜಖಂಗೊಂಡಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣ ದಾಖಲಾಗಿದೆ.