Mysore
27
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಚನ್ನಗಿರಿ ಪ್ರಕರಣ: ಠಾಣೆಗೆ ಬಂದ ಏಳು ನಿಮಿಷದೊಳಗೆ ಯುವಕ ಸಾವು: ಜಿ.ಪರಮೇಶ್ವರ್‌

ಬೆಂಗಳೂರು: ದೂರೊಂದರ ವಿಚಾರಣೆಗಾಗಿ ದಾವಣಗೆರೆಯ ಚನ್ನಗಿರಿ ಠಾಣೆ ಪೊಲೀಸರು ಆದಿಲ್‌ ಎಂಬ ಯುವಕನನ್ನು ಠಾಣೆಗೆ ಕರೆತಂದ ಏಳು ನಿಮಿಷದೊಳಗೆ ಆ ಯುವಕ ಮೃತಪಟ್ಟಿದ್ದಾನೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಯುವಕ ಮೃತಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೃತನ ವಿರುದ್ಧ ಠಾಣೆಯಲ್ಲಿ ದೂರೊಂದು ದಾಖಲಾಗಿತ್ತು. ಆ ಬಗ್ಗೆ ತನಿಖೆ ನಡೆಸಲು ಆತನನ್ನು ಠಾಣೆಗೆ ಕರೆತರಲಾಗಿತ್ತು. ಮೂರ್ಛೆ ರೋಗ ಇದ್ದ ಕಾರಣ ಆತ ಪೊಲೀಸರೆದುರೆ ಸಾವನ್ನಪ್ಪಿದ್ದಾನೆ. ಕುಟುಂಬದವರು ಅವನ ಸಾವಿಗೆ ಪೊಲೀಸರೆ ಕಾರಣ ಎಂದು ಆರೋಪಿಸುತ್ತಿದ್ದಾರೆ. ಆದರೆ ಮೃತ ಯುವಕನ ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆ ಬಳಿಕ ತಿಳಿಯಲಿದೆ ಎಂದರು.

ಪೊಲೀಸರ ಹಲ್ಲೆಯಿಂದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಭಾವಿಸಿ ಆತನ ಕಡೆಯವರು ಪ್ರತಿಭಟನೆ ಮಾಡಿ ಪೊಲೀಸ್ ಠಾಣೆಗೆ ನುಗ್ಗಿದ್ದಾರೆ. ಈ ವೇಳೆ ಟಿಯರ್ ಗ್ಯಾಸ್ ಬಳಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಕಲ್ಲು ತೂರಾಟದಿಂದ ಅಲ್ಲಿದ್ದವರಿಗೆ ಗಾಯಗಳಾಗಿವೆ ಎಂದು ವಿವರಿಸಿದರು.

ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ಮಾಡುವುದು, ತಲೆ ಕತ್ತರಿಸುತ್ತೇವೆ ಎಂದು ಪೋಲೀಸರಿಗೆ ಬೆದರಿಕೆ ಹಾಕುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಅಂತವರ ವಿರುದ್ಧ ಕಾನೂನಿನ ಪ್ರಕಾರ ಅಗತ್ಯವಾದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ವ್ಯಕ್ತಿಯ ಸಾವಿಗೆ ನಿಖರ ಕಾರಣಗಳೇನು ಎಂದು ತಿಳಿಯಲು ಶವಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಅದರ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ಅವರು, ಠಾಣೆಗೆ ಬಂದು ಧಮ್ಕಿ ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ. ಕೆಜೆ ಹಳ್ಳಿ, ಡಿಜೆ ಹಳ್ಳಿ ಮಾದರಿಯಲ್ಲಿ ಗಲಭೆ ಮಾಡಲು ಚನ್ನಗಿರಿಯಲ್ಲೂ ಸಂಚು ನಡೆದಿತ್ತು ಎಂಬುದನ್ನು ನಾನು ಕೇಳಿಸಿಕೊಂಡಿದ್ದೇನೆ ಎಂದು ಹೇಳಿದರು.

ಉಡುಪಿಯಲ್ಲಿನ ಗುಂಪು ಗಲಭೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಅಲ್ಲಲ್ಲಿ ಗಲ್ಲಿಗಳಲ್ಲಿ ಸಣ್ಣಪುಟ್ಟ ಗಲಭೆಗಳಾದರೆ ಅದನ್ನು ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಪರಿಗಣಿಸಲಾಗುವುದಿಲ್ಲ. ಕ್ರಿಕೆಟ್ ಆಟದ ವೇಳೆ ಗಲಭೆಗಳಾಗುತ್ತವೆ ಎಂದು ಮೊದಲೇ ಮಾಹಿತಿ ಇರುವುದಿಲ್ಲ. ಗಲಾಟೆ ನಡೆದಾಗ ಅದನ್ನು ನಿಯಂತ್ರಣಕ್ಕೆ ತರಲಾಗುವುದು. ಗಲಭೆಕೋರರನ್ನು ಮುಕ್ತವಾಗಿ ಓಡಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

Tags: