ಬೆಂಗಳೂರು: ಮುಂಬರುವ ಒಂದು ತಿಂಗಳ ಒಳಗಾಗಿ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕಿಮೋಥೆರಪಿ ಕೇರ್ ಸೆಂಟರ್‌ಗಳನ್ನು ಆರಂಭಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಕ್ಯಾನ್ಸರ್ ರೋಗಿಗಳು ಕಿಮೋಥೆರಪಿಗಾಗಿ ನಗರಗಳಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ನಾವು ಕೂಲಂಕುಷವಾಗಿ ಚರ್ಚೆ ನಡೆಸಿದ್ದು, ಜನರಿಗೆ ಅವರ ಜಿಲ್ಲೆಯಲ್ಲಿಯೇ ಕಿಮೋಥೆರಪಿ ಸೇವೆ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕಿಮೋಥೆರಪಿ ಡೇ ಕೇರ್ ಸೆಂಟರ್‌ಗಳನ್ನು ತೆರೆಯಲಾಗುವುದು. ಒಂದು ತಿಂಗಳ ಒಳಗಾಗಿ ಈ ಸೇವೆ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಮೂಲಕ ಕ್ಯಾನ್ಸರ್ ರೋಗಿಗಳು ದೂರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ದಣಿದು ಹೋಗುವುದು ತಪ್ಪಲಿದ್ದು, ಅವರ ಜಿಲ್ಲೆಗಳಲ್ಲೇ ಇರುವ ಜಿಲ್ಲಾಸ್ಪತ್ರೆಗಳಲ್ಲಿ ಕಿಮೋಥೆರಪಿ ಚಿಕಿತ್ಸೆ ದೊರಕಲಿದೆ.