ಮಂಡ್ಯ : ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ಅವರು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮೇಲೆ ರಸಗೊಬ್ಬರ ವಿತರಣೆಯಲ್ಲಿ ದುರಾಡಳಿತ ಮತ್ತು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಸಂಸತ್‌ನ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಅವರು, ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಸಕಾಲಕ್ಕೆ ರಸಗೊಬ್ಬರವನ್ನು ಸರಬರಾಜು ಮಾಡಿದ್ದರೂ, ರಾಜ್ಯ ಸರ್ಕಾರದ ಅಸಮರ್ಪಕ ವಿತರಣೆಯಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರಕ್ಕೆ ಸೂಕ್ತ ಸೂಚನೆಗಳನ್ನು ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಡಾ. ಸುಧಾಕರ್ ಅವರ ಆರೋಪಗಳನ್ನು ತಳ್ಳಿಹಾಕಿದ್ದಾರೆ. 2025ರ ಏಪ್ರಿಲ್ 1ರಿಂದ ಈವರೆಗೆ ಕೇಂದ್ರ ಸರ್ಕಾರವು ರಾಜ್ಯಕ್ಕೆ 5,46,391 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರವನ್ನು ಮಾತ್ರ ಸರಬರಾಜು ಮಾಡಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರವು 3,46,498.74 ಮೆಟ್ರಿಕ್ ಟನ್ ಹಳೆಯ ದಾಸ್ತಾನು ಇಟ್ಟುಕೊಂಡಿರುವುದರಿಂದ ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಕೇಂದ್ರ ಸರ್ಕಾರದಿಂದ ಬಾಕಿಯಿರುವ 1,36,109.2 ಮೆಟ್ರಿಕ್ ಟನ್ ರಸಗೊಬ್ಬರವನ್ನು ಶೀಘ್ರವಾಗಿ ಸರಬರಾಜು ಮಾಡುವಂತೆ ಒತ್ತಾಯಿಸುವ ಬದಲು, ಸಂಸದರು ರಾಜ್ಯದ ರೈತರಿಗೆ ಅನ್ಯಾಯ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಚಲುವರಾಯಸ್ವಾಮಿ ಆರೋಪಿಸಿದ್ದಾರೆ. ಈ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರವು 8.13 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಸರಬರಾಜು ಮಾಡಿದೆ ಎಂಬ ಸುಧಾಕರ್ ಅವರ ಹೇಳಿಕೆಯನ್ನು ಸಚಿವರು “ಹಸಿ ಸುಳ್ಳು” ಎಂದು ಕರೆದಿದ್ದಾರೆ.





