ಬೆಂಗಳೂರು: ರಾಜ್ಯದಲ್ಲಿ ತುಪ್ಪ ಉತ್ಪಾದನೆಯ ಗುಣಮಟ್ಟ ಪರಿಶೀಲನೆಗೆ ನಿರ್ಧಾರ ಮಾಡಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಹಿತಿ ನೀಡಿದ ಅವರು, ನಂದಿನಿ ಹೊರತುಪಡಿಸಿ ಉಳಿದ ತುಪ್ಪದ ಸ್ಯಾಂಪಲ್‌ಗಳ ಪರಿಶೀಲನೆಗೆ ನಿರ್ಧಾರ ಮಾಡಲಾಗಿದೆ.
ಸದ್ಯಕ್ಕೆ ಪ್ರಸಾದಗಳ ಸ್ಯಾಂಪಲ್ ಪರಿಶೀಲನೆ ಇಲ್ಲ. ಸದ್ಯ ತುಪ್ಪ ಪರಿಶೀಲನೆ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ ಎಂದರು.
ಈ ಬಗ್ಗೆ ಆಹಾರ ಸುರಕ್ಷತಾ ಆಯುಕ್ತರಿಗೆ ಹೇಳಿದ್ದೇನೆ. ರಾಜ್ಯದಲ್ಲಿ ಬಳಸುತ್ತಿರುವ ತುಪ್ಪದ ಬಗ್ಗೆ ತಪಾಸಣೆ ಮಾಡಲು ಸೂಚನೆ ನೀಡಿದ್ದೇನೆ.
ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ತುಪ್ಪ ಬರುತ್ತದೆ. ಎಲ್ಲಾ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಲು ತಿಳಿಸಿದ್ದೇನೆ ಎಂದು ಮಾಹಿತಿ ನೀಡಿದರು.
ಇನ್ನು ತಿರುಪತಿ ಲಡ್ಡು ವಿಚಾರದಲ್ಲಿ ಈ ರೀತಿ ಇದೆ ಅಂತ ಗೊತ್ತಾದಾಗ ಯಾರನ್ನು ನಂಬಬೇಕು ಎನ್ನುವ ಪ್ರಶ್ನೆ ಎದುರಾಗಿದೆ. ನಾಳೆ ದೇವಸ್ಥಾನಗಳಲ್ಲಿ ಕೊಡುವ ಪ್ರಸಾದ ಸ್ವೀಕರಿಸದೇ ಇರುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಬೇಸರ ವ್ಯಕ್ತಪಡಿಸಿದರು.