ಬೆಂಗಳೂರು: ನಟ ದರ್ಶನ್ ಅವರಿಂದ ನಡೆಯಲಾಗಿದೆ ಎನ್ನಲಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ತನಿಖೆ ಅಂತಿಮ ಘಟ್ಟ ತಲುಪಿರುವುದಾಗಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹೇಳಿದ್ದಾರೆ.
ಈ ಸಂಬಂಧ ಶುಕ್ರವಾರ (ಆ.23) ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು, ಪ್ರಕರಣದ ತನಿಖೆ ಅಂತಿಮ ಘಟ್ಟ ತಲುಪಿದ್ದು, ಆರೋಪ ಪಟ್ಟಿಯನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಎಲ್ಲಾ ದಾಖಲಾತಿಗಳು ಕಾಮಾಕ್ಷಿ ಪಾಳ್ಯ ಪೊಲೀಸರ ಕೈ ಸೇರಿದೆ. ಎಫ್‌ಎಸ್‌ಎಲ್ ವರದಿಗಳು ಮಾತ್ರ ಬಾಕಿಯಿದ್ದು, ಬಳಿಕ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದರು.
ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ಚಿಕ್ಕಣ್ಣ, ಆರೋಪಿ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.