ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಂದು ಅಬ್ಬರದ ಪ್ರಚಾರ ಆರಂಭಿಸಿದ್ದಾರೆ.
ಇಂದಿನಿಂದ ಅಬ್ಬರದ ಪ್ರಚಾರ ನಡೆಸುವ ಮೂಲಕ ಕಾಂಗ್ರೆಸ್ ನಾಯಕರಿಗೆ ಟಕ್ಕರ್ ಕೊಡಲು ನಿಖಿಲ್ ಕುಮಾರಸ್ವಾಮಿ ಮುಂದಾಗಿದ್ದು, ಹಳ್ಳಿ ಹಳ್ಳಿಯ ಮನೆಮನೆಗಳಿಗೂ ತೆರಳಿ ಪ್ರಚಾರ ನಡೆಸುತ್ತಿದ್ದಾರೆ.
ಮಾಕಳಿ ಗ್ರಾಮದಲ್ಲಿ ಪ್ರಚಾರ ನಡೆಸುವ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ಕೈ ಜೋಡಿಸಿ ನಿಮ್ಮ ಪಾದಗಳಿಗೆ ಶಿರಸಾವಹಿಸಿ ಬೇಡಿಕೊಳ್ಳುತ್ತೇನೆ. ನನಗೆ ಒಂದೇ ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ನನ್ನ ಕೊನೆಯ ಉಸಿರು ಇರುವರೆಗೂ ನಿಮ್ಮ ಜೊತೆ ಇರುತ್ತೇನೆ. ಈ ಬಾರಿ ನನಗೆ ಒಂದೇ ಒಂದು ಅವಕಾಶ ಮಾಡಿಕೊಡಿ. ಈ ಜಿಲ್ಲೆಗೂ ನಮಗೂ ಬಹಳ ನಂಟಿದೆ. ತಂದೆಯವರಾದ ಕುಮಾರಸ್ವಾಮಿಯವರು ದಲಿತರ, ಯುವಕರ ಹಾಗೂ ಅನ್ನದಾತರ ಪರ ಕೆಲಸ ಮಾಡಿದ್ದಾರೆ. ಕುಮಾರಣ್ಣ ಅವರನ್ನು ಸಿಎಂ ಮಾಡಿದ ಕೀರ್ತಿ ಚನ್ನಪಟ್ಟಣ ಕ್ಷೇತ್ರಕ್ಕೂ ಸಲ್ಲಬೇಕು. ಹಾಗಾಗಿ ಈ ಬಾರಿ ನನಗೆ ಅವಕಾಶ ಮಾಡಿಕೊಡಿ ಎಂದು ಕೈಮುಗಿದು ಬೇಡಿಕೊಂಡರು.





