ಚನ್ನಪಟ್ಟಣ: ತಾಲೂಕಿನ ಗರಕಹಳ್ಳಿಯಲ್ಲಿ ಗೌರಿ-ಗಣೇಶ ಹಬ್ಬದ ಅಂಗವಾಗಿ ಪ್ರತಿಪ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜನೆ ಮಾಡುವಾಗ ವ್ಯಕ್ತಿಯೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜರುಗಿದೆ.
ಗ್ರಾಮದ ಪಾಪಣ್ಣ(60) ಎಂಬುವವರು ಮೃತಪಟ್ಟವರು. ಗ್ರಾಮದಲ್ಲಿ ಗಣೇಶ ಪ್ರತಿಷ್ಠಾಪಿಸಿ ರಾತ್ರಿಯೇ ಕೆರೆಯಲ್ಲಿ ವಿಸರ್ಜಿಸಲು ತೀರ್ಮಾನಿಸಲಾಗಿತ್ತು. ಅದರಂತೆ, ಅಂದು ರಾತ್ರಿಯೇ ಮೆರವಣಿಗೆ ಮಾಡಿ, ಊರಾಚೆಗಿನ ಕೆರೆಗೆ ಮಧ್ಯರಾತ್ರಿ 2ಗಂಟೆ ಸುಮಾರಿಗೆ ವಿಸರ್ಜನೆಗೆ ತೆಗೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಪಾಪಣ್ಣ ಕೂಡ ಇದ್ದರು. ಈ ವೇಳೆ ಅವರು ಮದ್ಯಪಾನ ಕೂಡ ಮಾಡಿದ್ದರು ಎಂದು ಪೊಲೀಸರು ತಿಳಿಸಿದರು.
ಮೂರ್ತಿ ವಿಸರ್ಜನೆ ಬಳಿಕ ಎಲ್ಲರೂ ಮನೆಗೆ ಬಂದರು. ಆದರೆ, ಪಾಪಣ್ಣ ಬಂದಿರಲಿಲ್ಲ. ಈ ಬಗ್ಗೆ ಕುಟುಂಬದವರು ಅಕ್ಕಪಕ್ಕದರನ್ನು ವಿಚಾರಿಸಿದಾಗಲೂ ಎಲ್ಲೂ ಪತ್ತೆಯಾಗಿಲ್ಲ. ಕಡೆಗೆ ಕೆರೆಯ ಬಳಿ ಹೋಗಿ ನೋಡಿದಾಗ ಪಾಪಣ್ಣ ಅವರ ಟವೆಲ್ ಪತ್ತೆಯಾಗಿದೆ ಎಂದು ಹೇಳಿದರು.
ಇಂದು ಬೆಳಿಗ್ಗೆ ಅಗ್ನಿಶಾಮಕ ದಳದವರು ಕೆರೆಯಲ್ಲಿ ಹುಡುಕಾಟ ನಡೆಸಿ, ಶವ ಹೊರತೆಗೆದಿದ್ದಾರೆ. ನಂತರ ಶವವನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.