ಬೆಂಗಳೂರು: ಮುಸ್ಲಿಮರಿಗೆ ಮತದಾನ ಹಕ್ಕು ಇಲ್ಲದಂತೆ ಮಾಡಬೇಕು ಎಂಬ ವಿಚಾರಕ್ಕೆ ಈಗಾಗಲೇ ಕ್ಷಮೆ ಯಾಚಿಸಿದ್ದೇನೆ. ನನಗೆ ಆರೋಗ್ಯ ಸರಿಯಲ್ಲ, ಅನಾರೋಗ್ಯವೆಂಬ ಕಾರಣಕ್ಕೆ ವಿಚಾರಣೆಗೆ ಹೋಗುತ್ತಿಲ್ಲ ಎಂದು ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದ್ದಾರೆ.
ಈ ಕುರಿತು ಇಂದು(ಡಿ.2) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕೆಂಬ ವಿಚಾರವಾಗಿ ಪೊಲೀಸರು ಎಫ್‌ಐಆರ್ ದಾಖಲಿಸಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಆದರೆ ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ನಡೆಯೋಕೂ ಆಗುತ್ತಿಲ್ಲ. ಹೀಗಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ, ಒಂದು ವೇಳೆ ಪೊಲೀಸರೇ ಮಠಕ್ಕೆ ಬಂದರೆ ಹೇಳಿಕೆಗಳನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಎಚ್.ಡಿ.ಕುಮಾರಸ್ವಾಮಿ ಕರಿಯ ಎಂದವರ ಮೇಲೆ ಪ್ರಕರಣ ದಾಖಲಿಸಲಿಲ್ಲ, ಪಾಕ್ ಪರ ಘೋಷಣೆ ಕೂಗಿದವರ ಮೇಲೆ ಯಾವುದೇ ಕ್ರಮ ಕೈಗೊಳಲಿಲ್ಲ. ಆದರೆ ನಾನು ಕ್ಷಮೆಯಾಚಿಸಿದ್ದರೂ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಹಾಗಾಗಿ ಪೊಲೀಸರ ಮೇಲೆ ನನಗೆ ಅಸಮಾಧಾನವಿದೆ ಎಂದಿದ್ದಾರೆ.





