ಬೆಂಗಳೂರು: ಇದೇ ಏಪ್ರಿಲ್ 18 ಹಾಗೂ 19ರಂದು ಸಿಇಟಿ ಪರೀಕ್ಷೆ ನಡೆದಿತ್ತು. ಇದರಲ್ಲಿ 4 ವಿಷಯಗಳಲ್ಲಿ ಕನಿಷ್ಠ 45 ಪ್ರಶ್ನೆಗಳು ಕೈಬಿಟ್ಟ ಪಠ್ಯದಿಂದ ಬಂದಿರುವುದಾಗಿ ಆರೋಪ ಕೇಳಿಬಂದಿತ್ತು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳಲ್ಲಿ ಪಠ್ಯದಿಂದ ಕೈಬಿಟ್ಟ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಆರೋಪಿಸಿದ್ದರು.
ಹೀಗಾಗಿ ಈ ಗೊಂದಲವನ್ನು ಬಗೆಹರಿಸಲು ಸರ್ಕಾರ ನಾಲ್ವರು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿತ್ತು. ಈ ತಜ್ಞರ ಸಮಿತಿ ಇದೀಗ ಸಿಇಟಿ ಪರೀಕ್ಷೆ ಗೊಂದಲದ ಕುರಿತಾಗಿ ವರದಿ ಸಲ್ಲಿಸಿದೆ. ಈ ವರದಿಯನ್ನು ಆಧರಿಸಿ ಸರ್ಕಾರ ಮುಂದಿನ ವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಸಿಇಟಿ ಸಂಬಂಧ ಆಕ್ಷೇಪ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳ ಆಕ್ಷೇಪ ಹಿನ್ನೆಲೆ ತಜ್ಞರ ವರದಿ ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.





