Mysore
20
broken clouds

Social Media

ಸೋಮವಾರ, 26 ಜನವರಿ 2026
Light
Dark

ಸಚಿವ ಭೈರತಿ ಸುರೇಶ್‌ಗೆ ಸವಾಲು ಹಾಕಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಳಗಾವಿ: ಸಚಿವ ಭೈರತಿ ಸುರೇಶ್‌ ಅವರು ನನ್ನ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಅಥವಾ ಇನ್ನಿತರ ಯಾವುದೇ ಅಕ್ರಮ ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ನೇರವಾಗಿ ಸವಾಲು ಹಾಕಿದ್ದಾರೆ.

ಈ ಕುರಿತು ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣ ವಿಚಾರ ರಾಜ್ಯದಲ್ಲಿ ಬಹಿರಂಗವಾಗುತ್ತಿದಂತೆ ಸಚಿವ ಭೈರತಿ ಸುರೇಶ್‌ ಅವರು ಹೆಲಿಕಾಫ್ಟರ್‌ ಮೂಲಕ ತೆರಳಿ, ಮುಡಾ ಹಗರಣದ ಸಾವಿರಾರು ದಾಖಲೆಗಳನ್ನು ಸುಟ್ಟು ಹಾಕಿದ್ದಾರೆ ಎಂದು ನಾನು ಧ್ವನಿ ಎತ್ತಿದ್ದೇನೆ. ಹೀಗಾಗಿ ಭೈರತಿ ಸುರೇಶ್‌ ತಮ್ಮ ಬಂಡವಾಳ ಬಯಲಾಗುತ್ತದೆ ಎಂಬ ಕಾರಣಕ್ಕೆ ನನ್ನ ಬಗ್ಗೆ ವೈಯಕ್ತಿಕವಾಗಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ನಾನು ಸುರೇಶ್‌ರಂತೆ ಲೂಟಿ ಮಾಡಲು ಬಂದಿಲ್ಲ. ಭ್ರಷ್ಟಾಚಾರದ ಬಗ್ಗೆ ನನ್ನ ವಿರುದ್ಧ ಯಾವುದೇ ದಾಖಲೆಗಳಿದ್ದರೂ ಅದನ್ನು ಬಿಡುಗಡೆ ಮಾಡಲಿ. ನಾನು ಯಾವತ್ತೂ ಭ್ರಷ್ಟಾಚಾರ ಮಾಡಿಲ್ಲ, ಮಾಡೋದೋ ಇಲ್ಲ. ಒಂದು ವೇಳೆ ಸುರೇಶ್‌ ಅವರ ಹತ್ತಿರ ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಈಗಾಗಲೇ ನನ್ನ ವಿರುದ್ಧ ದಾಖಲೆ ಬಹಿರಂಗ ವಿಚಾರವಾಗಿ ಪೊನ್ನಣ್ಣ ಅವರನ್ನು ನೇಮಕ ಮಾಡಿದ್ದಾರೆ. ಪೊನ್ನಣ್ಣ ಇರುವುದು ಸಿಎಂ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾಗಿ. ವಿದ್ಯುತ್‌ ಇಲಾಖೆಗೂ ಪೊನ್ನಣ್ಣ ಅವರಿಗೂ ಏನು ಸಂಬಂಧ ಎಂಬುದು ತಿಳಿಯುತ್ತಿಲ್ಲ. ಬಹುಶಃ ನನ್ನ ವಿರುದ್ಧ ಫೇಕ್‌ ಫೈಲ್‌ ಕ್ರಿಯೆಟ್‌ ಮಾಡಲು ಪೊನ್ನಣ್ಣರಿಗೆ ಜವಾಬ್ದಾರಿ ನೀಡಿ ಮತ್ತೊಂದು ಭ್ರಷ್ಟಾಚಾರ ಮಾಡಲು ಹೊರಟ್ಟಿದ್ದಾರೆ. ಸತ್ಯವಾಗಿಯೂ ನನ್ನ ವಿರುದ್ಧ ದಾಖಲೆಗಳಿದ್ದರೆ ತಕ್ಷಣ ಬಿಡುಗಡೆ ಮಾಡಿ ನೋಡೋಣ. ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಹಾಗೂ ಇ.ಡಿ ತನಿಖಾ ಸಂಸ್ಥೆಗಳ ತನಿಖೆ ಚುರುಕಾಗಿದೆ. ಹೀಗಾಗಿ ಆ ಭಯದಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ, ಈಗಲೂ ನನ್ನ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಮುಡಾ ಕಚೇರಿಯಿಂದ ದಾಖಲೆಗಳನ್ನು ಸುರೇಶ್‌ ಅವರೇ ತಂದು ಸುಟ್ಟು ಹಾಕಿದ್ದಾರೆ ಎಂದು ಪುನರುಚ್ಚರಿಸುವ ಮೂಲಕ ಭೈರತಿ ವಿರುದ್ಧ ಕಿಡಿಕಾರಿದರು.

Tags:
error: Content is protected !!