ಬೆಂಗಳೂರು: ರಾಜ್ಯ ಸರ್ಕಾರ ಹಿಂದೂ ಹಬ್ಬಗಳ ಸಂದರ್ಭದಲ್ಲಿ ಮಾತ್ರ ಪೌರುಷವನ್ನು ತೋರುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ದೀಪಾವಳಿ ಹಬ್ಬದ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಪಟಾಕಿ ಸಿಡಿಸಲು ನಿರ್ಬಂಧ ಹೇರಿರುವ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸರ್ಕಾರ ಹಿಂದೂ ಹಬ್ಬಗಳಲ್ಲಿ ಮಾತ್ರ ಡಿಜೆ ಹಾಕಲು, ಗಣೇಶ ವಿಗ್ರಹ ವಿಸರ್ಜಿಸುವ ವೇಳೆ ಮೆರವಣಿಗೆ ನಡೆಸಲು ಹಾಗೂ ಪಟಾಕಿ ಸಿಡಿಸಲುನೀತಿ ಹಾಗೂ ನಿಯಮಗಳನ್ನು ಹೇರುತ್ತಿದೆ. ಆದರೆ, ಮಸೀದಿಗಳಲ್ಲಿ ಬೆಳಿಗ್ಗೆ 5 ಗಂಟೆಗೆ ಎದ್ದು ನಮಾಝ್ ಪ್ರಾರಂಭ ಮಾಡುತ್ತಾರೆ. ಅವರಿಗೆ ಯಾಕೆ ಈ ಸರ್ಕಾರದ ನೀತಿ ಮತ್ತು ನಿಯಮ ಅನ್ವಯಿಸುವುದಿಲ್ಲ ಎಂದು ಪ್ರಶ್ನೆ ಮಾಡಿದರು.
ಯಾರು ಏನೇ ಮಾಡಿದರೂ ಪಟಾಕಿ ಹೊಡೆಯುವುದನ್ನೂ ತಡೆಯಲು ಸಾಧ್ಯವಿಲ್ಲ. ಅದರ ಪಾಡಿಗೆ ಅದು ನಡೆಯುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.