Mysore
19
overcast clouds
Light
Dark

ರಾಜ್ಯ ಸರ್ಕಾರ ಅಸ್ಥಿರಗೊಳಿಸಿ, ನಾವು ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶವಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಹುಬ್ಬಳ್ಳಿ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆಗ್ರಹಿಸಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು, ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ ಅಂದರೆ ಭಯ ಪಡುವ ಅಗತ್ಯವಿಲ್ಲ. ಈ ವಿಷಯದಲ್ಲಿ ಅವರು ಕಾನೂನು ಹೋರಾಟ ಮಾಡಲು ನಮ್ಮ ತಕರಾರು ಕೂಡ ಇಲ್ಲ. ಕಾನೂನು ಹೋರಾಟದ ನೆಪದಲ್ಲಿ ತನಿಖೆಗೆ ಅಡ್ಡಿಪಡಿಸುವ ಕೆಲಸ ಮಾಡಬಾರದು ಎಂದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯಾಗಬೇಕು ಎಂಬ ಉದ್ದೇಶದಿಂದ ರಾಜ್ಯಪಾಲರು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಆ ಬಳಿಕ ಕಾನೂನು ತಜ್ಞರ ಸಲಹೆ ಪಡೆದು, ಅಳೆದು ತೂಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದರು.

ಉನ್ನತ ಸ್ಥಾನದಲ್ಲಿ ಇದ್ದಾಗ ಯಾವುದೇ ಆರೋಪಗಳು ಬಂದರೆ ಆ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಸಾರ್ವಜನಿಕ ಜೀವನದಲ್ಲಿ ಶುದ್ಧತೆ ಕಾಯ್ದುಕೊಳ್ಳದಿದ್ದರೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದಂತಾಗುತ್ತದೆ ಎಂದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಐದು ವರ್ಷ ಆಡಳಿತ ನಡೆಸಲು ಜನತೆ ಕಾಂಗ್ರೆಸ್‌ ಪಕ್ಷಕ್ಕೆ ಪೂರ್ಣ ಬಹುಮತ ನೀಡಿದ್ದಾರೆ. ಈ ಸರ್ಕಾರವನ್ನು ಅಸ್ಥಿರಗೊಳಿಸಿ ನಾವು ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶವಿಲ್ಲ. ಅವರು ಐದು ವರ್ಷ ಪೂರೈಸಬೇಕು ಎಂಬುದೇ ನಮ್ಮ ಆಸೆ. ಸಿದ್ದರಾಮಯ್ಯ ಆರೋಪ ಮುಕ್ತರಾದ ನಂತರ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿದರೂ ನಮ್ಮ ಅಭ್ಯಂತರವಿಲ್ಲ ಎಂದರು.