ಬೆಂಗಳೂರು: ಸಾರ್ವಜನಿಕ ಗ್ರಂಥಾಲಯಗಳಿಗೆ ಕನ್ನಡ ಪುಸ್ತಕಗಳನ್ನು ಸಗಟು ಖರೀದಿ ಮಾಡುವ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಕಳೆದ ೪-೫ ವರ್ಷಗಳಿಂದ ಸಾರ್ವಜನಿಕ ಗ್ರಂಥಾಲಯಗಳಿಗೆ ಕನ್ನಡ ಪುಸ್ತಕಗಳ ಸಗಟು ಖರೀದಿ ಆಗಿಲ್ಲ ಎಂಬ ಬಗ್ಗೆ ನನಗೆ ಮಾಧ್ಯಮಗಳ ಮೂಲಕ ತಿಳಿಯಿತು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಪ್ನ ಪುಸ್ತಕ ಮಳಿಗೆಯಲ್ಲಿ ನಡೆದ ಪುಸ್ತಕ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಅನೇಕ ಪ್ರಕಾಶಕರು ಈ ವಿಷಯದ ಬಗ್ಗೆ ನನ್ನ ಗಮನ ಸೆಳೆದಿದ್ದಾರೆ ಎಂಬ ಅಂಶವನ್ನು ಕೇಂದ್ರ ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಾಡಿನಲ್ಲಿ ಓದುವ ಸಂಸ್ಕೃತಿ ಬೆಳೆಯಬೇಕು. ಯುವ ಜನರು ಮೊಬೈಲ್‌ನಲ್ಲಿ ಕಳೆದುಹೋಗುವ ಬದಲು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಓದಿನ ಸಂಸ್ಕೃತಿಯನ್ನು ಉತ್ತೇಜಿಸುವ ಕೆಲಸವನ್ನು ನಾವು ನೀವೆಲ್ಲರೂ ಸೇರಿ ಮಾಡಬೇಕಿದೆ. ಹೆಮ್ಮರವಾಗಿ ಬೆಳೆದಿರುವ ಕನ್ನಡ ಸಾಹಿತ್ಯವನ್ನು ಮಾತೃಪ್ರೀತಿಯಿಂದ ನೋಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಕುಮಾರಸ್ವಾಮಿ ಸಿಎಂ ಅವರನ್ನು ಕೋರಿದ್ದಾರೆ.
ಸಾಮಾನ್ಯರು ಓದುವ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಭಾಷಾಭಿಮಾನ ಬೆಳೆಸುವ, ಸಾಹಿತ್ಯಾಸಕ್ತಿ ಸೃಷ್ಟಿಸುವ ಕೆಲಸ ಆಗಬೇಕಿದೆ. ಪುಸ್ತಕ ಸಂಸ್ಕೃತಿ ಬೆಳೆದಷ್ಟು ಭಾಷೆ ಸದೃಢವಾಗಿ ಬೆಳೆಯುತ್ತದೆ. ಈ ಹಿನ್ನೆಲೆಯಲ್ಲಿ ತಾವು ತುರ್ತು ಕ್ರಮ ಕೈಗೊಂಡು ಕನ್ನಡ ಪುಸ್ತಕಗಳ ಸಗಟು ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ಕೋರುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.





