ಧಾರವಾಡ: ಹೊಸ ವರ್ಷದಲ್ಲಿ ಕೇಂದ್ರ ಸರ್ಕಾರ ಉತ್ತರ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಿದೆ.
ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ.
ಧಾರವಾಡದಲ್ಲಿ ಶೀಘ್ರದಲ್ಲೇ ಆಧಾರ್ ಸೇವಾ ನಿರ್ವಹಣಾ ಕೇಂದ್ರದ ಸ್ಥಾಪನೆ. ನಮ್ಮ ಕರ್ನಾಟಕದಲ್ಲಿ ಈ ಮೊದಲು 6 ಜಿಲ್ಲೆಗಳಲ್ಲಿ ಆಧಾರ್ ಸೇವೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಈ ಸೌಲಭ್ಯವನ್ನು ರಾಜ್ಯದ ಹೆಚ್ಚಿನ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಉಳಿದ ಪ್ರತಿ ಜಿಲ್ಲೆಗೂ ಒಂದರಂತೆ ರಾಜ್ಯಾದ್ಯಂತ 19 ಕೇಂದ್ರಗಳನ್ನು ಸ್ಥಾಪಿಸಲಾಯಿತು ಎಂದು ಮಾಹಿತಿ ನೀಡಿದರು.
ಆ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಮಾತ್ರ ಆಧಾರ್ ಕೇಂದ್ರ ಮುಂದುವರಿದಿತ್ತು. ಜಿಲ್ಲೆಗೆ ಒಂದೇ ಕೇಂದ್ರ ಎಂಬ ಹೊಸ ನಿಯಮದಂತೆ ಧಾರವಾಡದ ಕೇಂದ್ರವನ್ನು ಸ್ಥಗಿತಗೊಳಿಸಲಾಗಿತ್ತು. ನಾನು ಧಾರವಾಡ ಕೇಂದ್ರವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮರು ಪ್ರಾರಂಭ ಮಾಡಬೇಕೆಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೃಷ್ಣವ್ ಅವರಿಗೆ ಪತ್ರ ನೀಡಿ ವಿನಂತಿಸಿದ್ದೆನು ಎಂದು ತಿಳಿಸಿದ್ದಾರೆ.
ಶಾಸಕ ಅರವಿಂದ್ ಬೆಲ್ಲದ್ ಅವರು ಸಹ ಧಾರವಾಡದಲ್ಲಿ ಆಧಾರ್ ಸೇವಾ ಕೇಂದ್ರ ಸ್ಥಾಪನೆಗೆ ನನಗೆ ವಿನಂತಿಸಿದ್ದರು. ಕೂಡಲೇ ನನ್ನ ಮಗುವಿಗೆ ಸ್ಪಂದಿಸಿ ಧಾರವಾಡ ಜಿಲ್ಲೆಗೆ ಅದರಲ್ಲಿಯೂ ಧಾರವಾಡದಲ್ಲಿ ಕೇಂದ್ರದ ಅವಶ್ಯಕತೆಯನ್ನು ಮನಗಂಡು ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗ ಸೂಚನೆ ನೀಡಿದ್ದು, ಧಾರವಾಡದಲ್ಲಿಯೂ ಒಂದು ಕೇಂದ್ರವನ್ನು ವಿಶೇಷ ಪ್ರಕರಣದಡಿ ಸ್ಥಾಪಿಸುವಂತೆ ಆದೇಶಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.




