ಬೆಳಗಾವಿ : ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಕುರಿತು ರಾಜ್ಯ ಬಹು ನಿರೀಕ್ಷಿತ ಮೇಕೆದಾಟು ಯೋಜನೆ ಅನುಷ್ಠಾನ ಮಾಡಲು ನಮ್ಮ ಸರ್ಕಾರ ಸಿದ್ಧವಿದೆ. ಇದರಿಂದ ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಹಲವು ನಗರಗಳಿಗೆ ನೀರು ಪೂರೈಕೆಗೆ ಸಹಕಾರಿಯಾಗಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ನಮ್ಮ ಜೊತೆ ಕೈಜೋಡಿಸಲಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಗುರುವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎನ್. ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ನೀರು ನಮ್ಮ ಹಕ್ಕು, ನಿಮ್ಮ ನೀರು ನಿಮ್ಮ ಹಕ್ಕು ತತ್ವದ ಮೇಲೆ ಹೋರಾಡೋಣ. ಈ ಯೋಜನೆಯ ಅನುಷ್ಠಾನದಿಂದ ನಮಗಿಂತ ತಮಿಳುನಾಡಿನವರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಅವರಿಗೆ ಹೆಚ್ಚಿನ ಕುಡಿಯುವ ನೀರು ಸಿಕ್ಕರೆ ನಮಗೆ ೪೦೦ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ ಎಂದರು.
ಮೇಕೆದಾಟು ಯೋಜನೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೋಳ್ಳಲಾಗಿದೆ. ನಮ್ಮ ನೆಲದಲ್ಲಿಯೇ ಈ ಯೋಜನೆಯನ್ನು ಜಾರಿಗೊಳಸಿದರೂ ಸಹಾ, ಕೇಂದ್ರ ಸರ್ಕಾರ, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು. ಇವುಗಳ ಒಪ್ಪಿಗೆ ಇಲ್ಲದೇ ಯೋಜನೆ ಆರಭಿಸಲು ಆಗುವುದಿಲ್ಲ. ಈ ಯೋಜನೆಯಿಂದ ಎರಡು ರಾಜ್ಯಗಳ ಸಂಕಷ್ಟ ಪರಿಸ್ಥಿತಿಗಳು ಸುಧಾರಣೆ ಆಗಲಿದ್ದು, ಶಾಸ್ವತ ಪರಿಹಾರ ದೊರೆಯಲಿದೆ ಎಂದು ಅವರು ತಿಳಿಸಿದರು.





