ಮುಂಬರುವ ಸೋಮವಾರ ( ಜನವರಿ 22 ) ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯಲಿದ್ದು, ಈ ಕಾರ್ಯಕ್ರಮದ ಕುರಿತು ರಾಜ್ಯ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಜನವರಿ 3ರಂದು ಆಘಾತಕಾರಿ ಹೇಳಿಕೆ ನೀಡಿದ್ದರು. ಗೋಧ್ರಾ ರೀತಿಯ ಅಪಾಯ ಸಂಭವಿಸುವ ಮಾಹಿತಿ ಇದೆ ಎಂದು ಹರಿಪ್ರಸಾದ್ ತಿಳಿಸಿದ್ದರು.
ಈ ರೀತಿಯ ಹೇಳಿಕೆ ನೀಡಿದ ಹರಿಪ್ರಸಾದ್ ಅವರನ್ನು ವಿಚಾರಣೆ ನಡೆಸಬೇಕೆಂದು ಹಲವರು ಕಿಡಿಕಾರಿದ್ದರು ಹಾಗೂ ಇನ್ನೂ ಕೆಲವರು ದೂರನ್ನೂ ಸಹ ನೀಡಿದ್ದರು. ಸದ್ಯ ಸಿಸಿಬಿ ಪೊಲೀಸರು ಈ ರೀತಿಯ ಹೇಳಿಕೆ ನೀಡಿದ ಬಿಕೆ ಹರಿಪ್ರಸಾದ್ ಅವರನ್ನು ವಿಚಾರಣೆ ನಡೆಸಿದ್ದಾರೆ.
ಕೆಕೆ ಗೆಸ್ಟ್‌ಹೌಸ್‌ನಲ್ಲಿ ಹರಿಪ್ರಸಾದ್ ಅವರ ವಿಚಾರಣೆ ನಡೆದಿದ್ದು, ವಿಚಾರಣೆ ಬಳಿಕ ಮಾಧ್ಯಮದವರ ಜತೆ ಮಾತನಾಡಿರುವ ಹರಿಪ್ರಸಾದ್ ನನಗೆ ವಿವಿಐಪಿ ಟ್ರೀಟ್‌ಮೆಂಟ್ ಬೇಡ, ಬೇಕಿದ್ದರೆ ಅರೆಸ್ಟ್ ಮಾಡಿ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದ ಸರ್ಕಾರದ ನಡೆ ವಿರುದ್ಧವೂ ಸಹ ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದು ಕಾಂಗ್ರೆಸ್ ಸರ್ಕಾರವೇ ಅಥವಾ ಆರ್‌ಎಸ್‌ಎಸ್ ಸರ್ಕಾರವೇ, ನಾನು ಯಾವ ಸರ್ಕಾರದಲ್ಲಿದ್ದೇನೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು. ಬೇಕಿದ್ದರೆ ಮಂಪರು ಪರೀಕ್ಷೆ ಮಾಡಿ ಎಂದು ಪೊಲೀಸರಿಗೆ ಹೇಳಿದ್ದೇನೆ. ವಿಜಯೇಂದ್ರ ಅವರನ್ನೂ ಸಹ ಮಂಪರು ಪರೀಕ್ಷೆಗೆ ಒಳಪಡಿಸಲಿ. ನನ್ನ ಕಥೆಯೇ ಹೀಗಾದರೆ ಕಾಂಗ್ರೆಸ್ ಕಾರ್ಯಕರ್ತರ ಕಥೆ ಏನು ಎಂದೂ ಸಹ ಹರಿಪ್ರಸಾದ್ ಮಾತನಾಡಿದರು.