ಬೆಂಗಳೂರು: ಸಿ.ಬಿ.ಐ ತನಿಖಾ ದಳಕ್ಕೆ ಮುಕ್ತ ಅನುಮತಿ ನೀಡಿರುವ ಅಧಿಸೂಚನೆ ವಾಪಸ್ ಪಡೆಯಲು ಸಚಿವ ಸಂಪುಟ ನಿರ್ಧಾರ ಮಾಡಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ ಪಾಟೀಲ್ ತಿಳಿಸಿದ್ದಾರೆ.
ಇಂದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಐ ಗೆ ರಾಜ್ಯದಲ್ಲಿ ಮುಕ್ತ ಅವಕಾಶವಿದ್ದುದನ್ನು ಹಿಂಪಡೆಯಲಾಗಿದೆ. ಸಿ.ಬಿ.ಐ ಗೆ ಸಹಜವಾದ ಪೂರ್ವಾಗ್ರಹ ಇದೆ ಎಂಬುದು ಇತ್ತೀಚಿನ ದಿನಗಳಲ್ಲಿ ದೃಢಪಡುತ್ತಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸಿ.ಬಿ.ಐ ಗೆ ಯಾವುದೇ ಮುಕ್ತ ಅವಕಾಶವಿರಬಾರದೆಂದು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.
ಸಿ.ಬಿ.ಐ ಸಂಸ್ಥೆಯನ್ನು ಕೇಂದ್ರ ಸರ್ಕಾರ ರಾಜಕೀಯ ಉದ್ದೇಶಗಳಿಗಾಗಿ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಇನ್ನು ಮುಂದೆ ಯಾವುದಾದರೂ ಪ್ರಕರಣದಲ್ಲಿ ಸಿ.ಬಿ.ಐ ಮೂಲಕ ತನಿಖೆ ನಡೆಯಬೇಕಾದರೆ ರಾಜ್ಯಸರ್ಕಾರದ ಒಪ್ಪಿಗೆ ಮುಖ್ಯವಾದದ್ದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿನ ಪ್ರಕರಣಗಳನ್ನು ಪ್ರಕರಣವಾರು ಆಧಾರದ ಮೇಲೆ ತನಿಖೆ ನಡೆಸಲು ಸಿ.ಬಿ.ಐ ತನಿಖಾ ಸಂಸ್ಥೆಗೆ ಅನುಮತಿ ನೀಡಲು ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದರು.