ಬೆಂಗಳೂರು: ಮುಡಾ ಪ್ರಕರಣದಿಂದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಜಾತಿಗಣತಿ ವಿಚಾರವನ್ನು ಮುನ್ನಲೆಗೆ ತಂದು ನಾಟಕ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಬೆಂಗಳೂರಿನ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಗುರುತರ ಆರೋಪಗಳು ಕೇಳಿ ಬಂದಾಗೆಲ್ಲಾ ಸಾರ್ವಜನಿಕರ ಗಮನವನ್ನು ಬೇರೆ ಕಡೆಗೆ ಹರಿಸಲು, ಈ ಸರ್ಕಾರ ಯಾವಾಗಲೂ ತಂತ್ರಗಾರಿಕೆ ಹೂಡುತ್ತದೆ. ಹೀಗಾಗಿ ಮುಡಾ ಪ್ರಕರಣದಿಂದ ದಾರಿ ತಪ್ಪಿಸುವ ಕೆಲಸ ಮಾಡಿ ಜಾತಿಗಣತಿ ವಿಷಯವನ್ನು ಮುನ್ನಲೆಗೆ ತಂದು ನಾಟಕವಾಡುತ್ತಿದೆ ಎಂದು ಆರೋಪಿಸಿದರು.
ಜಾತಿಗಣತಿ ಪ್ರಾರಂಭಿಸಲು 10 ವರ್ಷಗಳ ಹಿಂದೆ ಕಾಂತರಾಜು ಆಯೋಗ ರಚನೆ ಮಾಡಿತ್ತು. ಈ ಹತ್ತು ವರ್ಷಗಳಲ್ಲಿ ಹಲವಾರು ಬೆಳವಣಿಗೆಗಳು ನಡೆದಿವೆ. ಆ ಹತ್ತು ವರ್ಷಗಳ ಜಾತಿಗಣತಿಯನ್ನು ಆಯೋಗವು ಸಿಎಂ ಸಿದ್ದರಾಮಯ್ಯರಿಗೆ ಲೋಕಸಭೆ ಚುನಾವಣೆಗೂ ಮೊದಲೇ ವರದಿ ನೀಡಿತ್ತು. ಹೀಗಿದ್ದರೂ ಹಳೆಯ ಜಾತಿಗಣತಿಯನ್ನು ವರದಿ ಕೊಟ್ಟ ಕೂಡಲೇ ಬಿಡುಗಡೆ ಮಾಡದೇ ಸುಮ್ಮನಿದ್ದು, ಈಗ ಮಾತ್ರ ಯಾಕೆ ಬಿಡುಗಡೆ ಮಾಡುತ್ತಿದೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ಮುಡಾ ವಿಚಾರವನ್ನು ಮರೆಮಾಚಲು ಸಿಎಂ ಸಿದ್ದರಾಮಯ್ಯ ಜಾತಿಗಣತಿ ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದರು.