ಬೆಂಗಳೂರು: ಅಧಿಕಾರ ದುರುಪಯೋಗ, ವಂಚನೆ ಮತ್ತು ಭ್ರಷ್ಟಾಚಾರ ಅಡಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಬಿ. ಎಂ ಪಾರ್ವತಿ, ಬಾವಮೈದುನ ಬಿ. ಎಂ. ಮಲ್ಲಿಕಾರ್ಜುನ ಸ್ವಾಮಿ, ಮುಡಾ ಮಾಜಿ ಅಧ್ಯಕ್ಷರುಗಳಾದ ಬಸವೇಗೌಡ, ಎಚ್.ವಿ, ರಾಜೀವ್ ಮತ್ತು ಆಯುಕ್ತರಾಗಿದ್ದ ಡಿ.ಬಿ ನಟೇಶ್ ಅವರ ವಿರುದ್ಧವೂ ಸಹ ದೂರು ದಾಖಲಾಗಿದೆ.ಎನ್.ಆರ್ ರಮೇಶ್ ಎಂಬುವವರು ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬೃಹತ್ ಹಗರಣಕ್ಕೆ ಸಂಬಂಧಿಸಿದ 383 ಪುಟಗಳ ಸಂಪೂರ್ಣ ದಾಖಲೆಗಳನ್ನು ರಮೇಶ್ ಬಿಡುಗಡೆ ಮಾಡಿದ್ದಾರೆ.
ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (MUDA) ದಲ್ಲಿ ಬದಲಿ ನಿವೇಶನಗಳ ಹೆಸರಿನಲ್ಲಿ ನಡೆದಿರುವ ಬೃಹತ್ ಹಗರಣದ ಬಗ್ಗೆ ಪ್ರಸ್ತಾಪಿಸಿರುವ ಅವರು ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ಪ್ರಭಾವದಿಂದ ತಮ್ಮ ಪತ್ನಿಯ ಹೆಸರಿಗೆ ಕಾನೂನು ಬಾಹಿರವಾದ ಬದಲಿ ನಿವೇಶನಗಳ ಹಂಚಿಕೆಯ ಕಾರ್ಯದಲ್ಲಿ 40 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
50:50 ರ ಅನುಪಾತದಲ್ಲಿ ಪಾರ್ವತಿ ಕೋಂ ಸಿದ್ಧರಾಮಯ್ಯನವರಿಗೆ “ದೇವನೂರು 3ನೇ ಹಂತದ ಬಡಾವಣೆ”ಯ ಬದಲಾಗಿ ಮುಡಾ ಮಾಲೀಕತ್ವದ ಬೇರೊಂದು ಬಡಾವಣೆಯಲ್ಲಿ ಒಟ್ಟು 38,284 ಚ. ಅಡಿ ವಿಸ್ತೀರ್ಣದ ಸ್ವತ್ತನ್ನು “ಬದಲಿ ನಿವೇಶನ”ದ ಹೆಸರಿನಲ್ಲಿ ಮಂಜೂರು ಮಾಡುವ ಬಗ್ಗೆ ಮುಡಾದ ಅಧಿಕಾರಿಗಳು ನಿರ್ಣಯವನ್ನು ಅನುಮೋದಿಸಿದ್ದರು.
“ದೇವನೂರು 3ನೇ ಹಂತದ ಬಡಾವಣೆ” ಯಲ್ಲಿನ ನಿವೇಶನಗಳ ಬದಲಾಗಿ ಪ್ರತಿ ಚ. ಅಡಿಗೆ 12,000 ಗಳಿಗಿಂತಲೂ ಹೆಚ್ಚಿರುವ ಮೈಸೂರಿನ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ “ವಿಜಯನಗರ 03 ಮತ್ತು 04ನೇ ಹಂತದ ಬಡಾವಣೆ”ಗಳಲ್ಲಿ ಒಟ್ಟು 38,284 ಚ. ಅಡಿ ವಿಸ್ತೀರ್ಣದ 14 ನಿವೇಶನಗಳನ್ನು “ಬದಲಿ ನಿವೇಶನ”ದ ಹೆಸರಿನಲ್ಲಿ ಶ್ರೀಮತಿ. ಬಿಎಂ ಪಾರ್ವತಿಯವರ ಹೆಸರಿಗೆ 2021-2022 ರಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನು ಮೀರಿ ಹಂಚಿಕೆ ಮಾಡಲಾಗಿದೆ.
ಅಂದಿನ ಮುಡಾ ಅಧ್ಯಕ್ಷರಾಗಿದ್ದ ಎಚ್‌ವಿ ರಾಜೀವ್ ಮತ್ತು ಆಯುಕ್ತರಾಗಿದ್ದ ಡಿಬಿ ನಟೇಶ್ ಸಿದ್ಧರಾಮಯ್ಯನವರ ಧರ್ಮಪತ್ನಿ ಪಾರ್ವತಿ ಅವರ ಹೆಸರಿಗೆ ಮೈಸೂರಿನ ವಿಜಯನಗರ ಬಡಾವಣೆ 03ನೇ ಹಂತ ಮತ್ತು 04ನೇ ಹಂತದ ಪ್ರದೇಶಗಳಲ್ಲಿ ಒಟ್ಟು 14 ನಿವೇಶನಗಳನ್ನು ಹಂಚಿಕೆ ಮಾಡಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.