ಬೆಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ಖಾದ್ಯ ಇಡ್ಲಿಯನ್ನು ಎಲ್ಲೆಡೆ ತಯಾರಿಸಲಾಗುತ್ತದೆ. ಆದರೆ ಈ ಇಡ್ಲಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ ಎಂದು ಆಹಾರ ಇಲಾಖೆ ವರದಿ ಬಹಿರಂಗಪಡಿಸಿದೆ.
ಈ ಹಿನ್ನೆಲೆಯಲ್ಲಿ ಜನತೆಗೆ ಬಿಗ್ ಶಾಕ್ ಎದುರಾಗಿದ್ದು, ಇಡ್ಲಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಪರೀಕ್ಷೆಯಿಂದ ತಿಳಿದುಬಂದಿದೆ.
ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ಪದೇ ಪದೇ ದೂರುಗಳು ಬಂದಿದ್ದವು. ದೂರು ಬಂದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಸುಮಾರು 500 ಆಹಾರ ಮಳಿಗೆಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಸುಮಾರು 35 ಕಡೆ ಪ್ಲಾಸ್ಟಿಕ್ ಬಳಕೆ ಮಾಡಿರುವುದು ಪತ್ತೆಯಾಗಿದೆ. ಈ ಬೆನ್ನಲ್ಲೇ 35 ಮಳಿಗೆದಾರರಿಗೆ ನೋಟಿಸ್ ನೀಡಲಾಗಿದೆ.
ಇದೆಲ್ಲದರ ಜೊತೆಗೆ ಮುಖ್ಯವಾಗಿ 500 ಕಡೆಗಳಲ್ಲಿ ಸಂಗ್ರಹಿಸಿದ್ದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಯ ಪ್ರಕಾರ 35 ಡೇಂಜರ್ ಎಂದು ಬಂದಿದ್ದು, ಇಡ್ಲಿಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಶಾಖ ಹೆಚ್ಚಾದಂತೆ ಪಿಎಫ್‌ಎಎಸ್ ಕೆಮಿಕಲ್ ಎಂಬ ಹಾನಿಕಾರಕ ಅಂಶ ಹೊರ ಸೂಸುತ್ತದೆ ಎಂದು ವರದಿ ಬಂದಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಆಹಾರ ತಯಾರಿಕೆಗೆ ಈ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡುವುದಕ್ಕೆ ಇಲಾಖೆ ಮುಂದಾಗಿದೆ.





