ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ರಾಜ್ಯ ಸರ್ಕಾರದಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾಕೆ ಹಣ ನೀಡುತ್ತೀರಿ, ನಿಮ್ಮ ಜೇಬಿನಿಂದ ಹಣ ನೀಡಿ ಎಂದು ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಮಾರ್ಚ್.12) ಗ್ಯಾರಂಟಿ ಅನುಷ್ಟಾನ ಸಮಿತಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರಿ ವೇತನ ಪಡೆಯುವ ಹಕ್ಕಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ಹೇಳಿಕೆ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರದಲ್ಲಿ ಸಂಘ-ಸಂಸ್ಥೆಗಳಿಗೆ ಅನುದಾನ ನೀಡಲು ಹಣವಿಲ್ಲ ಎಂದು ಹೇಳುತ್ತಾರೆ. ಅತಿಥಿ ಶಿಕ್ಷಕರಿಗೆ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಗೌರವಧನ ನೀಡಲು ಹಣವಿಲ್ಲವೆನ್ನುತ್ತಾರೆ. ಅಲ್ಲದೇ ಹಾಲು ಉತ್ಪಾದಕರು ಹಾಗೂ ಗುತ್ತಿಗೆದಾರರ ಹಣವನ್ನು ಉಳಿಸಿಕೊಂಡಿದ್ದಾರೆ. ಆದರೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲು ಮಾತ್ರ ಹಣವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಸರ್ಕಾರ ಮೋಜು-ಮಸ್ತಿ ಮಾಡಿಸುತ್ತಿದ್ದಾರೆ. ನಿಮ್ಮ ಕಾರ್ಯಕರ್ತರಿಗೆ ನಿಮ್ಮ ಜೇಬಿನಿಂದ ಹಣ ನೀಡಿ ಸರ್ಕಾರದ ಹಣ ಯಾಕೆ ನೀಡುತ್ತೀರಿ? ಜನರ ಹಣವನ್ನು ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.





